ಮೊಸುಲ್: ಟೈಗ್ರಿಸ್ ನದಿಗೆ ಹಾರಿ ಪರಾರಿಯಾಗಲು ಐಸಿಸ್ ಉಗ್ರರ ಯತ್ನ

ಮೊಸುಲ್,ಜು.10:ತಮ್ಮ ಭದ್ರಕೋಟೆಯಾದ ಮೊಸುಲ್ ಪತನಗೊಂಡ ಬಳಿಕ ಯುದ್ಧರಂಗದಂದ ಪಲಾಯನಗೈಯುತ್ತಿರುವ ಐಸಿಸ್ ಉಗ್ರರು ನಗರದ ಮಧ್ಯದಲ್ಲಿ ಹರಿಯುವ ಟೈಗ್ರಿಸ್ ನದಿಗೆ ಹಾರಿ ಪಲಾಯನಗೈಯಲು ಯತ್ನಿಸುತ್ತಿದ್ದಾರೆಂದು ಇರಾಕಿ ಮೂಲಗಳು ತಿಳಿಸಿವೆ.
ಸುಮಾರು ಎಂಟು ತಿಂಗಳುಗಳ ರಕ್ತಸಿಕ್ತ ಸಮರದ ಬಳಿಕ ಮೊಸುಲ್ ನಗರವು ಇರಾಕಿ ಪಡೆಗಳ ವಶವಾಗಿತ್ತು. ಈ ಸುದೀರ್ಘಕಾಳಗದಲ್ಲಿ ಹತ್ತು ಸಾವಿರಕ್ಕೂ ಅಧಿಕ ನಾಗರಿಕರು, ಸೈನಿಕರು ಸಾವನ್ನಪ್ಪಿದ್ದಾರೆ.
ಮೊಸುಲ್‌ನ ಹಳೆನಗರ ಪ್ರದೇಶದಲ್ಲಿ ದಟ್ಟವಾದ ಹೊಗೆಯೇಳುತ್ತಿರುವ ದೃಶ್ಯವನ್ನು ಅಲ್ಲಿಗೆ ಭೇಟಿ ನೀಡಿದ ವರದಿಗಾರರು ಕಂಡರು. ನಗರದ ಬೀದಿಗಳಲ್ಲಿ ಕೊಳೆತುನಾರುವ ಹೆಣಗಳು ಬಿದ್ದಿರುವುದು ಕಂಡುಬಂದಿವೆ. ಆದಾಗ್ಯೂ ನಗರದ ಸಂದುಗೊಂದುಗಳಲ್ಲಿ ತಲೆಮರೆಸಿಕೊಂಡಿರುವ ಕೆಲವು ಬಂಡುಕೋರರು ಈಗಲೂ ಗುಂಡುಗಳನ್ನು ಹಾರಿಸುತ್ತಿರುವ ಸದ್ದುಗಳು ಕೇಳಿಬರುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮಧ್ಯೆ ಭಯೋತ್ಪಾದನಾ ನಿಗ್ರಹ ದಳವು ಹಳೆಯ ನಗರ ಮೊಸುಲ್‌ನಲ್ಲಿರುವ ಟೈಗ್ರಿಸ್ ನದಿಯ ದಂಡೆಯಲ್ಲಿ ಇರಾಕಿ ರಾಷ್ಟ್ರ ಧ್ವಜದ ಪತಾಕೆಯನ್ನು ಹಾರಿಸಿದೆ.
ಈ ಭೀಕರ ಯುದ್ಧದಲ್ಲಿ ಸಂಭವಿಸಿದ ಸಾವುನೋವಿನ ವಿವರಗಳನ್ನು ಇರಾಕಿ ಸರಕಾರವು ಬಹಿರಂಗಪಡಿಸಿಲ್ಲವಾದರೂ,ಮೊಸುಲ್ ಕದನದ ನೇತೃತ್ವದ ವಹಿಸಿದ ಭಯೋತ್ಪಾದನಾ ನಿಗ್ರಹ ದಳವು ಶೇ.40ರಷ್ಟು ಹಾನಿಯನ್ನು ಅನುಭವಿಸಿದೆಯೆಂದು ಅಮೆರಿಕ ರಕ್ಷಣಾ ಇಲಾಖೆಯು ಇರಾಕಿಗೆ ಆರ್ಥಿಕ ನೆರವನ್ನು ಕೋರಿ ಸಲ್ಲಿಸಿದ ವರದಿ ಹೇಳಿದೆ.





