ಪನಾಮಗೇಟ್ ಹಗರಣ: ಜೆಐಟಿಯಿಂದ ಪಾಕ್ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಕೆ

ಇಸ್ಲಾಮಾಬಾದ್,ಜು.10: ಪನಾಮಾಗೇಟ್ ಎಂದೇ ಕುಖ್ಯಾತವಾದ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಮತ್ತವರ ಕುಟುಂಬದ ವಿರುದ್ಧದ ಲಂಚ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡವು ಮಂಗಳವಾರ ತನ್ನ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.
ಇಸ್ಲಾಮಾಬಾದ್‌ನ ರಾಜಧಾನಿ ಪ್ರಾಂತೀಯ ಪೊಲೀಸರ ಬಿಗಿಭದ್ರತೆಯ ನಡುವೆ ಜಂಟಿ ತನಿಖಾ ತಂಡದ ಸದಸ್ಯರು ಮಂಗಳವಾರ ಬೆಳಗ್ಗೆ ಪಾಕ್ ಸುಪ್ರೀಂಕೋರ್ಟ್‌ಗೆ ಆಗಮಿಸಿದರು. ‘ಪುರಾವೆ’ ಎಂದು ಲೇಬಲ್‌ಗಳನ್ನು ಹಚ್ಚಲಾದ ದೊಡ್ಡ ಗಾತ್ರದ ಕಾರ್ಡ್‌ಬೋರ್ಡ್ ಪೆಟ್ಟಿಗೆಗಳನ್ನು ನ್ಯಾಯಾಲಯಕ್ಕೆ ತರಲಾಯಿತು.
ಪನಾಮಗೇಟ್ ಹಗರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳ ಹೊರತಾಗಿ, ಪ್ರಧಾನಿ ಶರೀಫ್, ಅವರ ಸಹೋದರ ಹಾಗೂ ಪಂಜಾಬ್ ಮುಖ್ಯಮಂತ್ರಿ ಶಹಬಾಝ್ ಶರೀಫ್, ಅವರ ಮಕ್ಕಳಾದ ಹುಸೈನ್, ಹಸನ್ ಹಾಗೂ ಮಾರಿಯಾಮ್ ಶರೀಫ್ ಹಾಗೂ ಅವರ ಅಳಿಯ ನಿವೃತ್ತ ಕ್ಯಾಪಪ್ಟನ್ ಮುಹಮ್ಮ ದ್ ಸಫ್ದರ್ ಅವರ ಹೇಳಿಕೆಗಳನ್ನು ಈ ವರದಿಯು ಒಳಗೊಂಡಿದೆ. ನ್ಯಾಯಮೂರ್ತಿಗಳಾದ ಶೇಖ್ ಅಝ್ಮತ್ ಸಯೀದ್, ಇಜಾಝುಲ್ ಹಾಗೂ ಎಜಾಝ್ ಅಫ್ಝಲ್ ಅವರನ್ನೊಳಗೊಂಡ ನ್ಯಾಯಪೀಠವು ಜಂಟಿ ತನಿಖಾ ತಂಡದ ವಾದವನ್ನು ಆಲಿಸಲಿದೆ.
1990ರ ದಶಕದಲ್ಲಿ ಶರೀಫ್ ಕುಟುಂಬವು ಲಂಡನ್‌ನಲ್ಲಿ ಭಾರೀ ಪ್ರಮಾಣದ ಆಸ್ತಿಗಳನ್ನು ಖರೀದಿಸಲು ಕಪ್ಪುಹಣವನ್ನು ಬಿಳುಪುಗೊಳಿಸಿದ್ದರೆಂಬ ಆರೋಪದ ತನಿಖೆ ನಡೆಸಲು ಪಾಕ್ ಸುಪ್ರೀಂಕೋರ್ಟ್ ಕಳೆದ ಮೇನಲ್ಲಿ ಜಂಟಿ ತನಿಖಾ ತಂಡವನ್ನು ಸ್ಥಾಪಿಸಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಜೆಐಟಿಯು, ಹಲವಾರು ಹಾಲಿ ಹಾಗೂ ಮಾಜಿ ಅಧಿಕಾರಿಗ ವಿಚಾರಣೆ ನಡೆಸಿತ್ತು.





