ಟೈಮ್ಸ್ ನೌ ಪುರಸ್ಕಾರಕ್ಕೆ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಆಯ್ಕೆ

ಮುಂಬೈ, ಜು.10: ಟೈಮ್ಸ್ ನೌ ಮಾಧ್ಯಮ ಚಾನೆಲ್ ಸಂಸ್ಥೆಯು ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠ ಜಗದ್ವಾಪಿ ಅನಿವಾಸಿ ಭಾರತೀಯ ಪುರಸ್ಕಾರಕ್ಕೆ ಕರ್ನಾಟಕದ ದ.ಕ. ಜಿಲ್ಲೆಯ ಮಂಗಳೂರು ಮೂಲದ ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಆಯ್ಕೆಯಾಗಿದ್ದಾರೆ.
ಜಾಗತಿಕ ವಲಯದ ಪ್ರಸಿದ್ಧ ಮಾಧ್ಯಮಗಳಲ್ಲಿ ಒಂದಾದ ಟೈಮ್ಸ್ ಸಮೂಹದ ಟೈಮ್ಸ್ ನೌ ಇಂಗ್ಲಿಷ್ ಮಾಧ್ಯಮ ಚಾನೆಲ್ 2014 ಸಾಲಿನಿಂದ ಭಾರತೀಯರಾಗಿದ್ದು ವಿದೇಶಿ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ಅನಿವಾಸಿ ಭಾರತೀಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಉದ್ಯಮಶೀಲತೆ (ಆಂಟರ್‌ಪ್ರಿನರ್‌ಶಿಪ್), ಉದ್ಯೋಗ (ಪ್ರೊಪೆಶನಲ್), ವಿದ್ಯಾರ್ಥಿ (ಸ್ಟೂಡೆಂಟ್), ಕಲೆ/ಮನೋರಂಜನೆ (ಆರ್ಟ್/ಇಂಟರ್‌ಟೇನ್ಮೆಂಟ್), ಮಾನವೀಯ ಒಲವು (ಫಿಲಾಂಥ್ರಾಪಿ), ಸಮಾಜ ಸೇವೆ ಮತ್ತು ದೇಶಕ್ಕಾಗಿ ನೀಡಿದ ಗಣನೀಯ ಕೊಡುಗೆಗಾಗಿ (ಸೋಶಿಯಲ್ ಗುಡ್ ಆ್ಯಂಡ್ ಕಾಂಟ್ರಿಬ್ಯೂಶನ್ ಟು ಇಂಡಿಯಾ) ಈ ಪ್ರಶಸ್ತಿ ನೀಡಲಾಗುತ್ತದೆ.
ಸಮುದ್ರದಾಚೆ ನೆಲೆಸಿರುವ ಭಾರತೀಯರು ಹಾಗೂ ಭಾರತೀಯ ನಿವಾಸಿ ಯುಎಸ್‌ಎ, ಕೆನಡಾ, ಸಿಂಗಾಪುರ, ಲಂಡನ್ (ಯುಕೆ), ಮೀಡಲ್ ಈಸ್ಟ್, ದುಬೈ, ಸೌದಿ ಅರೇಬಿಯಾ, ಬಾಹ್ರೇನ್, ಕತರ್ ಮತ್ತು ಕುವೈಟ್ ಮೊದಲಾದ ಕೊಲ್ಲಿ ರಾಷ್ಟ್ರಗಳಲ್ಲಿ ವಾಸವಾದ ಅನಿವಾಸಿ ಭಾರತೀಯರು ಈ ಪ್ರಶಸ್ತಿಗೆ ಅರ್ಹರಾಗಿದ್ದಾರೆ.
ವಿವಿಧ ಕ್ಷೇತ್ರದ ಉದ್ಯಮಿಗಳ ಅನನ್ಯ ಸೇವೆ ಮನಗಂಡು ಕನಿಷ್ಠ ಐದು ಬಾರಿ ಮೌಲ್ಯಮಾಪನದ ನಂತರ ಈ ಪ್ರಶಸ್ತಿಗೆ ಅಂತಿಮವಾಗಿ ವಿಜೇತರನ್ನು ಆರಿಸಲಾಗುವುದು.
ಕರ್ನಾಟಕದ ದ.ಕ. ಜಿಲ್ಲೆ ಮಂಗಳೂರು ಮೂಲದ ರೊನಾಲ್ಡ್ ಕೊಲಾಸೊ ಓರ್ವ ಯಶಸ್ವಿ ಉದ್ಯಮಿ ಆಗಿದ್ದು ಸಮಾಜ ಸೇವೆ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಉದಾರದಾನಿ ಆಗಿ ಸೇವಾ ನಿರತರಾಗಿ ಲೋಕೋಪಕಾರಿ ಆಗಿ ಜನಾನುರೆಣಿಸಿದ್ದಾರೆ. ಯಾವುದೇ ಜಾತಿ, ಧರ್ಮ, ಪಂಥ, ಮತ, ಬಾಷೆ, ವ್ಯತ್ಯಾಸ ಕಾಣದೆ ವಿಶೇಷವಾಗಿ ದಕ್ಷಿಣ ಕನ್ನಡದ ಜನತೆಗೆ, ಬಡವ ಬಲ್ಲಿದವರಿಗೆ, ಹಲವಾರು ಸಂಘ ಸಂಸ್ಥೆಗಳಿಗೆ ತನ್ನಿಂದಾಗ ಅಪಾರ ಸೇವೆ ಸಲ್ಲಿಸಿದ್ದಾರೆ.
ಕೊಲಸೋ ಅವರು ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯವನ್ನು ನೀಡುವಲ್ಲಿ ಯಶಸ್ವಿ ಕಂಡಿದ್ದು ಕರ್ನಾಟಕ ರಾಜ್ಯದಾದ್ಯಂತ ಪ್ರವಾಸಗೈದು ಸಾವಿರಾರು ಜನತೆಯ ಸೇವೆಯಲ್ಲಿ ತೊಡಗಿಸಿ ಕೊಂಡಿರುವರು. ಇವರ ಸಮಾಜ ಸೇವೆಗೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
2015ರಲ್ಲಿ 80 ರಾಷ್ಟ್ರಗಳ ಪೈಕಿ ಓರ್ವರನ್ನಾಗಿ ಆಸ್ಟ್ರೇಲಿಯಾ ರಾಷ್ಟ್ರದ ಪ್ರಧಾನಮಂತ್ರಿ ಅವರು ಇಂಟರ್‌ನ್ಯಾಷನಲ್ ರೆಕಗ್ನಿಶನ್ ಆವಾರ್ಡ್ ಥ್ರೂ ಲೀಡರ್‌ಶಿಪ್ ಇನ್ ಸರ್ವಿಸ್ ಎಕ್ಸ್‌ಲೆನ್ಸಿ ಪುರಸ್ಕಾರ ನೀಡಿ ಗೌರವಿಸಿದ ಭಾರತೀಯರಲ್ಲಿ ಕೊಲಾಸೋ ಅವರೋರ್ವರು. ಇತ್ತೀಚಿಗೆ ಯುಎಸ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರ್ಪಡಿಸಿ ಔತಣಕೂಟದಲ್ಲಿ ಆಮಂತ್ರಣ ಸ್ವೀಕರಿಸಿ ಪಾಲ್ಗೊಂಡವರಲ್ಲಿ ಕೊಲಾಸೋ ಸೇರಿದ್ದರು.
ಟೈಮ್ಸ್ ನೌ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭ ಜು.11ರಂದು ಸಂಜೆ ಮುಂಬೈ ನಗರದ ಗ್ರ್ಯಾಂಡ್ ಹೈಯ್ಯತ್‌ನಲ್ಲಿ ನೇರವೇರಲಿದ್ದು, ಭಾರತೀಯ ಪ್ರತಿಷ್ಠಿತ ಉದ್ಯಮಿ ರೊನಾಲ್ಡ್ ಕೊಲಾಸೋ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಲಿದ್ದಾರೆ.







