ಜು.12: ಜಿಎಸ್‌ಟಿ ಜಾಗೃತಿ ಕಾರ್ಯಕ್ರಮ
ಮಂಗಳೂರು, ಜು.10: ಕೇಂದ್ರ ಸರಕಾರವು ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ಜಾಗೃತ ಕಾರ್ಯಕ್ರಮವು ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಭವನದಲ್ಲಿ ಜು.12ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಜೀವನ್ ಸಲ್ದಾನ್ಹಾ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಕೇಂದ್ರ ಸರಕಾರವು ಜು.1ರಿಂದ ಜಾರಿಗೆ ತಂದಿರುವ ಜಿಎಸ್‌ಟಿಯ ಎಸ್‌ಜಿಎಸ್‌ಟಿ, ಸಿಜಿಎಸ್‌ಟಿ, ಐಜಿಎಸ್‌ಟಿ ಕುರಿತು ಕೂಲಂಕಷವಾಗಿ ಜನಸಾಮಾನ್ಯರು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಜಿಎಸ್‌ಟಿ ಕೌನ್ಸಿಲ್ ಹಾಗೂ ಕೇಂದ್ರ ಹಣಕಾಸು ಇಲಾಖೆಯು ಜಿಎಸ್‌ಟಿ ಕುರಿತು ಈಗಾಗಲೇ ಹಲವಾರು ಅಧಿಸೂಚನೆ, ಸ್ಪಷ್ಟೀಕರಣ ನೀಡಿದೆ. ಈ ಸಭೆಯಲ್ಲಿ ಜನಸಾಮಾನ್ಯರು ಜಿಎಸ್‌ಟಿ ಕುರಿತು ಕುಂದು ಕೊರತೆ, ಪ್ರಶ್ನೆಗಳನ್ನು ಕೇಳುವುದರ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬಹುದು. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಈಗಾಗಲೇ ಜಿಎಸ್‌ಟಿ ಕುರಿತು ಹಲವು ಕಾರ್ಯಾಗಾರಗಳನ್ನು ಹಮ್ಮಿಕೊಂಡಿತ್ತು ಎಂದರು.
‘ಜಿಎಸ್‌ಟಿ ಜಾಗೃತಿ ಕಾರ್ಯಕ್ರಮ’ವನ್ನು ಆಂತರಿಕ ಕಂದಾಯ ಸೇವೆ ಹಾಗೂ ಕೇಂದ್ರ ತೆರಿಗೆ ಇಲಾಖೆಯ ಆಯುಕ್ತ ಡಾ.ಎಂ.ಸುಬ್ರಹ್ಮಣ್ಯಮ್ ಉದ್ಘಾಟಿಸಲಿದ್ದಾರೆ.
ಜಿಎಸ್‌ಟಿ ಜಾಗೃತ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಲಹೆಗಾರರು ಭಾಗವಹಿಸಲಿದ್ದು, ಜಿಎಸ್‌ಟಿಯಲ್ಲಿ ಹೊಸ ಅವಕಾಶಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಎಲ್ಲ ಸದಸ್ಯರು ಹಾಗೂ ಜನಸಾಮಾನ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಎಸ್‌ಟಿ ಕುರಿತ ಅನುಮಾನ, ಆತಂಕಗಳ ಕುರಿತು ಸ್ಪಷ್ಟೀಕರಣ ಪಡೆದುಕೊಳ್ಳಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಖಜಾಂಚಿ ಗಣೇಶ್ ಭಟ್, ಕಾರ್ಯದರ್ಶಿ ಅಬ್ದುಲ್ ಹಮೀದ್, ಪ್ರವೀಣ್ ಕಲ್ಬಾವಿ, ವಾಟಿಕಾ ಪೈ ಉಪಸ್ಥಿತರಿದ್ದರು.







