ಸಚಿವರಿಬ್ಬರನ್ನು ಸಂಪುಟದಿಂದ ಕೈಬಿಡಲು ಶೋಭಾ ಕರಂದ್ಲಾಜೆ ಒತ್ತಾಯ

ಬೆಂಗಳೂರು, ಜು. 11: ಕರಾವಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಸಚಿವಾರದ ರಮಾನಾಥ ರೈ ಹಾಗೂ ಯು.ಟಿ.ಖಾದರ್ ಕಾರಣ. ಹೀಗಾಗಿ, ರಾಜ್ಯ ಸರಕಾರ ಕೂಡಲೇ ಈ ಇಬ್ಬರೂ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದ ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಬ್ಬರೂ, ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಒಂದು ಗುಂಪನ್ನು ಎತ್ತಿಕಟ್ಟಿದ್ದಾರೆ. ಇಂತಹ ಸಚಿವರನ್ನು ತಕ್ಷಣ ಮುಖ್ಯಮಂತ್ರಿಗಳು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ರಮಾನಾಥರೈ ಚುನಾವಣಾ ಭಾಷಣ ಮಾಡುತ್ತಿದ್ದಾರೆ. ನನ್ನನ್ನು ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರನ್ನು ಚುನಾವಣೆಗೆ ಬಂದು ನಿಲ್ಲಿ ಎಂದು ಸವಾಲು ಹಾಕುತ್ತಿದ್ದಾರೆ. ಚುನಾವಣೆಗೆ ಇನ್ನೂ 10 ತಿಂಗಳಿದೆ. ಯಾರು ಎಲ್ಲಿ ನಿಲ್ಲಬೇಕು ಎಂಬುದನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಈಗ ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸವಾಗಬೇಕೇ ಹೊರತು ಚುನಾವಣೆ ವಿಷಯವಲ್ಲ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಬಿಜೆಪಿ ಎಂದೂ ಮತ ಬ್ಯಾಂಕ್ ರಾಜಕೀಯ ಮಾಡುತ್ತಿಲ್ಲ. ಇಲ್ಲಿ ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುತ್ತಿಲ್ಲ ಎಂದ ಅವರು, ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಿತ್ತು. ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳುವ ನಿರೀಕ್ಷೆ ಇಟ್ಟುಕೊಂಡಿದ್ದೆವು ಎಂದರು.
ಪತ್ನಿ ಜತೆ ಪೊಲೀಸರ ಅಸಭ್ಯ ವರ್ತನೆ; ಸೋಮವಾರ ಬೆಳಗ್ಗೆ ಮಂಗಳೂರಿನ ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಅವರ ಮನೆಗೆ ನುಗ್ಗಿದ 20ಕ್ಕೂ ಹೆಚ್ಚು ಪೊಲೀಸರು ಅವರ ಪತ್ನಿ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಪತ್ನಿಯೇ ಮೊಬೈಲ್ ಮೂಲಕ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಎಂದು
ಶೋಭಾ ಕರಂದ್ಲಾಜೆ ಹೇಳಿದರು.







