ಸ್ಯಾನಿಟರಿ ನ್ಯಾಪ್ಕಿನ್‌ಗಳ ಮೇಲೆ ಜಿಎಸ್‌ಟಿ ವಿರೋಧಿಸಿ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
ಬೆಂಗಳೂರು, ಜು. 11: ಮಹಿಳೆಯರು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ಕಿನ್‌ಗಳ ಮೇಲೆ ಕೇಂದ್ರ ಸರಕಾರ ವಿಧಿಸಿರುವ ಶೇ.12ರಷ್ಟು ಜಿಎಸ್‌ಟಿ ತೆರಿಗೆಯನ್ನು ವಿರೋಧಿಸಿ ಜನವಾದಿ ಮಹಿಳಾ ಸಂಘಟನೆಯ ಸದಸ್ಯೆಯರು, ಮಹಿಳೆಯರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಬಸವನಗುಡಿಯ ಟ್ಯಾಕ್ಸಿ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ಯುವತಿಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಎಸ್‌ಟಿ ತೆರಿಗೆಯಿಂದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬಳಸುವವರು ಶೇ.12ರಷ್ಟು ಮಾತ್ರ. ಇನ್ನುಳಿದ ಮಹಿಳೆಯರು ಮತ್ತು ಯುವತಿಯರು ಈಗಲೂ ಅಸುರಕ್ಷಿತ ವಿಧಾನಗಳನ್ನೇ ಬಳಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ವಿತರಿಸಬೇಕಿತ್ತು. ಆದರೆ ನ್ಯಾಪ್ಕಿನ್‌ಗಳ ಮೇಲೆ ತೆರಿಗೆ ವಿಧಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
30 ಬಿಲಿಯನ್ ಡಾಲರ್ ವಹಿವಾಟಿನ ಪೂಜಾ ಸಾಮಗ್ರಿಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡುವುದಾದರೆ, ಶೇ.12ರಷ್ಟು ಮಹಿಳೆಯರು ಬಳಸುವ ನ್ಯಾಪ್ಕಿನ್‌ಗಳು ಸರಕಾರದ ಬೊಕ್ಕಸವನ್ನು ತುಂಬಿಸಲಿದೆಯೇ ಎಂದು ಕೆ.ಎಸ್.ವಿಮಲಾ ಖಾರವಾಗಿ ಪ್ರಶ್ನಿಸಿದರು.
ನ್ಯಾಪ್ಕಿನ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿರುವ ಕೇಂದ್ರ ಸರಕಾರದ ಕ್ರಮ ಮಹಿಳಾ ವಿರೋಧಿ ನಡೆ. ಸ್ಯಾನಿಟರಿ ನ್ಯಾಪ್ಕಿನ್‌ಗಳ ಮೇಲೆ ತೆರಿಗೆ ವಿಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳಲು ನೀಡುತ್ತಿರುವ ಜನಪ್ರತಿನಿಧಿಗಳ ಹೇಳಿಕೆಗಳು ಬಾಲಿಶ. ಕೂಡಲೆ ನ್ಯಾಪ್ಕಿನ್‌ಗಳ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು. ಸುರಕ್ಷಿತ ಮತ್ತು ಪರಿಸರ ಸ್ನೇಹಿ ನ್ಯಾಪ್ಕಿನ್‌ಗಳು ಮಹಿಳೆಯರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರವನ್ನು ಪೋಸ್ಟ್ ಮಾಡಲಾಯಿತು. ಇದೇ ವೇಳೆ ಪ್ರತಿಭಟನೆಯಲ್ಲಿ ನಗರ ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಶಾರದಾ, ಸಂಚಾಲಕಿ ಕೆ.ಶ್ರೀಮತಿ ಸೇರಿದಂತೆ ಇತರರು ಇದ್ದರು.







