ಉಗ್ರರಿಗೆ ಬಲಿಯಾದ ಅಮರನಾಥ ಯಾತ್ರಿಗಳ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ಪರಿಹಾರ

ಶ್ರೀನಗರ,ಜು.11: ಜಮ್ಮು-ಕಾಶ್ಮೀರ ಸರಕಾರವು ಸೋಮವಾರ ರಾತ್ರಿ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಏಳು ಅಮರನಾಥ ಯಾತ್ರಿಗಳ ಕುಟುಂಬಕ್ಕೆ ತಲಾ ಐದು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದೆ. ಇದೇ ವೇಳೆ ಶ್ರೀ ಅಮರನಾಥ ಮಂದಿರ ಮಂಡಳಿ(ಎಸ್‌ಎಎಸ್‌ಬಿ)ಯೂ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಘೋಷಿಸಿದೆ.
ಗಂಭೀರವಾಗಿ ಗಾಯಗೊಂಡವರಿಗೆ ಎರಡು ಲಕ್ಷ ರೂ.ಮತ್ತು ಸಣ್ಣಪುಟ್ಟ ಗಾಯಗಳಾ ದವರಿಗೆ ಒಂದು ಲಕ್ಷ ರೂ.ಪರಿಹಾರವನ್ನು ನೀಡಲು ಸರಕಾರವು ನಿರ್ಧರಿಸಿದೆ ಎಂದು ಅಧಿಕಾರಿಗಳು ಮಂಗಳವಾರ ಇಲ್ಲಿ ತಿಳಿಸಿದರು.
ಗುಂಡುಗಳ ಸುರಿಮಳೆಯ ನಡುವೆಯೇ ಅಸಾಧಾರಣ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಮೆರೆದು ಇನ್ನಷ್ಟು ಜೀವಹಾನಿಯನ್ನು ತಪ್ಪಿಸಿದ ಯಾತ್ರಿಗಳಿದ್ದ ಬಸ್ ಚಾಲಕ ಶೇಖ್ ಸಲೀಂ ಗಫೂರ್ ಅವರಿಗೆ ಮೂರು ಲಕ್ಷ ರೂ.ಬಹುಮಾನವನ್ನು ಸರಕಾರವು ನೀಡಲಿದೆ ಎಂದರು.
ಎಸ್‌ಎಎಸ್‌ಬಿ ಅಧ್ಯಕ್ಷರೂ ಆಗಿರುವ ರಾಜ್ಯಪಾಲ ಎನ್.ಎನ್.ವೊಹ್ರಾ ಅವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 1.50 ಲ.ರೂ.ಮತ್ತು ಸಾಮಾನ್ಯ ಗಾಯಗೊಂಡವರಿಗೆ 75,000 ರೂ.ಪರಿಹಾರವನ್ನೂ ಪ್ರಕಟಿಸಿದ್ದಾರೆ.





