ಸುಪ್ರಿಂಕೋರ್ಟ್ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆಗೆ ಆಗ್ರಹ
ಪರಿಶಿಷ್ಟ ನೌಕರರ ಮುಂಭಡ್ತಿ ಮೀಸಲಾತಿ
ಬೆಂಗಳೂರು, ಜು.11: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಹಕ್ಕು ರಕ್ಷಿಸಿ, ಅವರು ಹಿಂಭಡ್ತಿಯಾಗದಂತೆ ತಡೆಯಲು ಕೂಡಲೇ ಪರಿಶಿಷ್ಟ ನೌಕರರ ಮುಂಭಡ್ತಿ ಮೀಸಲಾತಿ ಸಂಬಂಧ ಸುಪ್ರಿಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿ ಜು.19 ರಂದು ದಲಿತ ಸಂಘಟನೆಗಳ ಒಕ್ಕೂಟದಿಂದ ರಾಜ್ಯಾದ್ಯಂತ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಎನ್.ಮುನಿಸ್ವಾಮಿ, ಸುಪ್ರಿಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಈಗಾಗಲೇ ಭಡ್ತಿ ಪಡೆದು ಸೇವೆ ಸಲ್ಲಿಸುತ್ತಿರುವ 20 ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿಗಳ ನೌಕರರು ಹಿಂಭಡ್ತಿ ಪಡೆಯಬೇಕಾಗುತ್ತದೆ. ಹೀಗಾಗಿ ಸರಕಾರ ಆದಷ್ಟು ತ್ವರಿತವಾಗಿ ಈ ಕುರಿತು ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು. ಪರಿಶಿಷ್ಟ ನೌಕರರ ಮೀಸಲಾತಿ ಹಕ್ಕನ್ನು ರಕ್ಷಿಸುವ ಕುರಿತ ಸರಕಾರ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ. ಸುಪ್ರಿಂಕೋರ್ಟ್ ತೀರ್ಪಿನ ವಿರುದ್ಧವಾಗಿ ಸರಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಹಾಗೂ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿ ಜೂ.13 ರಂದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಆಂಜನೇಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಪರಿಶಿಷ್ಟ ನೌಕರರ ಪರವಾಗಿ ವಾದಿಸಲು ಸಮರ್ಥ ವಕೀಲರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದರು. ಆದರೆ, ಸಚಿವರು ಭರವಸೆ ನೀಡಿ ಒಂದು ತಿಂಗಳಾಗುತ್ತಿದ್ದರೂ ಇದುವರೆಗೂ ಯಾವುದೇ ವಕೀಲರನ್ನು ನೇಮಕ ಮಾಡಿಲ್ಲ. ಅಲ್ಲದೆ, ಸುಪ್ರಿಂಕೋರ್ಟ್‌ನ ಆದೇಶದ ವಿರುದ್ಧವಾಗಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ಪರಿಶಿಷ್ಟ ನೌಕರರು ಹಿಂಭಡ್ತಿಯಾಗುವ ಆತಂಕದಲ್ಲಿ ಕಳೆಯುತ್ತಿದ್ದಾರೆ. ಆದುದರಿಂದ ಕೂಡಲೇ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕಾಯ್ದೆಯನ್ನು ಜಾರಿ ಮಾಡಬೇಕು ಹಾಗೂ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಬಹಿರಂಗಗೊಳಿಸಬೇಕು. ಈ ಆಧಾರದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.72ಕ್ಕೆ ಏರಿಕೆ ಮಾಡಬೇಕು. ಈ ಕಾಯ್ದೆಯನ್ನು ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್‌ಪಿಐ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ದಲಿತ ಸಂಘಟನೆ ಮುಖಂಡರಾದ ಎನ್.ಮೂರ್ತಿ, ಎಂ.ಸೋಮಶೇಖರ್ ಉಪಸ್ಥಿತರಿದ್ದರು.







