ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಗೈದು ಕೈಕಾಲು ಕಡಿದ ದುಷ್ಕರ್ಮಿಗಳು

ಶಿಮ್ಲಾ,ಜು.11 : ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಕೊಟ್ಖೈ ತೆಹ್ಸಿಲ್ ಎಂಬಲ್ಲಿ 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜುಲೈ 8ರಂದು ನಡೆದಿದೆ. ಘಟನೆಯನ್ನು ಖಂಡಿಸಿ ಕೊಟ್ಖೈ ಹಾಗೂ ಶಿಮ್ಲಾದ ಜನರು ರಸ್ತೆಗಿಳಿದು ಪ್ರತಿಭಟಿಸಿದರಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕತ್ತು ಹಿಚುಕಿ ಸಾಯಿಸಿದ ನಂತರ ದುರುಳರು ಆಕೆಯ ಕೈಕಾಲುಗಳನ್ನು ಕಡಿದು ಹಾಕಿದ್ದಾರೆಂದು ಕೆಲ ವರದಿಗಳು ತಿಳಿಸಿವೆಯಾದರೂ ಪೊಲೀಸರು ಇದನ್ನು ದೃಢೀಕರಿಸಿಲ್ಲ.
ಕೊಲೆಯಾದ ಬಾಲಕಿ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಜುಲೈ 8ರಂದು ಶಾಲೆಯಿಂದ ಮನೆಗೆ ಹಿಂದಿರುಗುವ ಹಾದಿಯಲ್ಲಿ ಅಪಹರಣಕ್ಕೊಳಗಾಗಿದ್ದಳು. ಆಕೆ ಮನೆಗೆ ಹಿಂದಿರುಗದೇ ಇದ್ದಾಗ ಆಕೆಯ ಹೆತ್ತವರು ಪೊಲೀಸ್ ದೂರು ನೀಡಿದ್ದರು. ಬಾಲಕಿಗಾಗಿ ಹುಡುಕಾಡಿದಾಗ ಕಾಡು ಪ್ರದೇಶವೊಂದರಲ್ಲಿ ಆಕೆಯ ನಗ್ನ ಮೃತದೇಹ ಪತ್ತೆಯಾಗಿತ್ತು. ಪೋಸ್ಟ್ ಮಾರ್ಟಂ ವರದಿ ಸಾಮೂಹಿಕ ಅತ್ಯಾಚಾರವಾಗಿರುವುದನ್ನು ದೃಢಪಡಿಸಿದೆ.
ಪೊಲೀಸರು ಸಂತ್ರಸ್ತೆಯ ಸಹಪಾಠಿಗಳ, ಶಾಲಾ ಸಿಬ್ಬಂದಿಯ ಹಾಗೂ ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅಪರಾಧಿಗಳ ಬಗ್ಗೆ ಪೊಲೀಸರಿಗೆ ಇಲ್ಲಿಯ ತನಕ ಯಾವುದೇ ಸುಳಿವು ಸಿಕ್ಕಿಲ್ಲವೆನ್ನಲಾಗಿದೆ.
ಶಿಮ್ಲಾ ಪ್ರೆಸ್ ಕ್ಲಬ್ ಸದಸ್ಯರೂ ಮೋಂಬತ್ತಿ ಮೆರವಣಿಗೆ ನಡೆಸಿ ಸಂತ್ರಸ್ತೆಗೆ ನ್ಯಾಯ ಸಿಗುವಂತೆ ಆಗ್ರಹಿಸಿದರು.







