ಯುವಜನತೆ ಜನಸಂಖ್ಯಾ ಸ್ಪೋಟ ತಡೆಯಬಹುದು: ಟಿ.ಬಿ.ಜಯಚಂದ್ರ

ತುಮಕೂರು,ಜು.11: ಯುವ ಜನಾಂಗ ತಮಗೆ ಎಷ್ಟು ಮಕ್ಕಳು ಇದ್ದರೆ ಸುಖೀ ಜೀವನ ಸಾಧ್ಯ ಎಂಬುದನ್ನು ಅರಿತು ತಮ್ಮ ಆದಾಯಕ್ಕೆ ಅನುಗುಣವಾಗಿ ಮಕ್ಕಳನ್ನು ಪಡೆಯುವ ಬಗ್ಗೆ ಯೋಜನೆ ರೂಪಿಸಿಕೊಳ್ಳುವ ಮೂಲಕ ಜನಸಂಖ್ಯಾ ಸ್ಟೋಟವನ್ನು ತಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ವಿಶ್ವ ವಿದ್ಯಾಲಯ ವಿಜ್ಙಾನ ಕಾಲೇಜಿನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತುಮಕೂರು ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,
ನಮ್ಮಲ್ಲಿರುವ ಸಂಪನ್ಮೂಲಕ್ಕೆ ತಕ್ಕಂತೆ ನಮ್ಮ ಜನಸಂಖ್ಯೆ ಇರಬೇಕು. ಇಂದು ನಮ್ಮ ಭೂಮಿ ವಿಕಾಸವಾಗಿಲ್ಲ, ನಮ್ಮ ಜನಸಂಖ್ಯೆ ದುಪ್ಪಟ್ಟು ವಿಕಾಸವಾಗುತ್ತಿದೆ. ಇದರಿಂದ ವಾಯು ಮಾಲಿನ್ಯ, ಜಲಮಾಲಿನ್ಯ, ಅನಾರೋಗ್ಯ ಸಮಸ್ಯೆಗಳು ಸೇರಿದಂತೆ ನಮ್ಮಲ್ಲಿ ಅನೇಕ ಸಮಸ್ಯೆಗಳು ಹುಟ್ಟಿಕೊಂಡು ನೆಮ್ಮದಿಯಿಲ್ಲದಂತೆ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ ಎಂದರು.
ಈಗಿರುವ ಮದುವೆಯ ವಯಸ್ಸಿನಲ್ಲಿ ಬದಲಾವಣೆಯಾಗಿ ಹೆಣ್ಣಿಗೆ 22 ಮತ್ತು ಗಂಡಿಗೆ 25 ವರ್ಷ ವಯಸ್ಸಿನ ಮಿತಿ ಜಾರಿಗೆ ಬರಬೇಕೆಂದು ಅಭಿಪ್ರಾಯಪಟ್ಟ ಸಚಿವರು, ನಮ್ಮದು ಪುರುಷ ಪ್ರಧಾನ ದೇಶ. ಇಲ್ಲಿ ಮಕ್ಕಳನ್ನು ಹಡೆಯುವವಳು ಹೆಣ್ಣೇ ಆದರೂ ಇಲ್ಲಿ ಪುರುಷನದ್ದೇ ನಿರ್ಣಯ ಅಂತಿಮ. ಆದ್ದರಿಂದ ತಮ್ಮ ದೇಹಾರೋಗ್ಯ, ತಮ್ಮ ಕುಟುಂಬದ ವರಮಾನ, ಇರಲು ಸೂರು, ಇವೇ ಮೊದಲಾದ ಮೂಲಭೂತ ಸೌಲಭ್ಯಗಳ ಲಭ್ಯತೆಗನುಗುಣವಾಗಿ ಮಕ್ಕಳನ್ನು ಪಡೆಯುವ ಮುಂದೂಡುವ ನಿರ್ಣಯವನ್ನು ಹೆಣ್ಣು ಹೊತ್ತುಕೊಳ್ಳಬೇಕೆಂದು ಸಚಿವರು ಹೆಣ್ಣು ಮಕ್ಕಳಿಗೆ ಕಿವಿಮಾತು ಹೇಳಿದರು.
ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಭೂಮಿ ಇದ್ದಷ್ಟೆ ಇದೆ. ಜನಸಂಖ್ಯೆ ಹೆಚ್ಚುತ್ತಲೇ ಇದೆ. ಜನಸಂಖ್ಯೆ ಏರಿಕೆ ಎಲ್ಲರಲ್ಲೂ ಆತಂಕ ಮೂಡಿಸುತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಗಳು ಹಿಂದೆ ಬಿದ್ದಿವೆ. ಇದರ ಪರಿಣಾಮ ಬಡತನ ಹೆಚ್ಚಾಗುತ್ತಿದೆ ಎಂದ ಶಾಸಕರು, ನಾವು ಒಂದು ಎರಡು ಮಕ್ಕಳ ಸೂತ್ರ ಅನುಸರಿಸುತ್ತೇವೆ ಎಂಬ ಶಪಥ ಮಾಡುವ ಮೂಲಕ ಅನುಷ್ಠಾನ ಮಾಡಬೇಕಿದೆ ಎಂದರು.
ತುಮಕೂರುವಿವಿ ಕುಲಸಚಿವ ಪ್ರೋಎಂ.ವೆಂಕಟೇಶ್ವರಲು ಮಾತನಾಡಿ, ನಿರುದ್ಯೋಗ ಸಮಸ್ಯೆ ಜನಸಂಖ್ಯಾ ಸ್ಪೋಟಕ್ಕೆ ಮೂಲ ಕಾರಣವಾಗಿದ್ದು, ಎಲ್ಲರಿಗೂ ಉದ್ಯೋಗ ದೊರಕಿದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲಿದೆ ಎಂದರು.
ಈ ವರ್ಷದ ವಿಶ್ವ ಜನಸಂಖ್ಯಾ ದಿನಾಚರಣೆಯ ಘೋಷವಾಕ್ಯ ಹೊಸ ಅಲೆ, ಹೊಸ ವಿಶ್ವಾಸ, ಸಂಪೂರ್ಣ ಜವಾಬ್ದಾರಿಯಿಂದ ಕುಟುಂಬ ವಿಕಾಸ ಕುರಿತಂತೆ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಕೆ.ಕುಲ್ಕರ್ಣಿ ಅವರು ಮಾತನಾಡಿ, ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ 30% ಜನ ಯುವಕರಿದ್ದಾರೆ. ಇವರು ಬದಲಾವಣೆಯ ಹರಿಕಾರರಾಗಬೇಕು. ಜನಸಂಖ್ಯೆ ತಡೆಗಟ್ಟುವ ಬಗ್ಗೆ ತಮ್ಮ ಧೋರಣೆ ಪ್ರದರ್ಶಿಸಬೇಕು. ಯುವಕರು ಜನಸಂಖ್ಯೆಯ ಏರಿಕೆಯ ಅರಿವುಳ್ಳವರಾಗಿ ಜೀವಿಸಿದಲ್ಲಿ ದೇಶದ ಆರ್ಥಿಕತೆಗೆ ಕ್ಷೇಮ ಎಂದರು. ಭಾರತದ ಜನಸಂಖ್ಯೆ ಸ್ವಾತಂತ್ರ್ಯಕ್ಕೆ ಮೊದಲು (ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ) 27ಕೋಟಿ ಇತ್ತು. ಆದರೆ ಇಂದು ನಮ್ಮ ಜನಸಂಖ್ಯೆ 134ಕೋಟಿಗಳಾಗಿದೆ. ವಿಶ್ವದ ಪ್ರತಿ 6 ಜನರಲ್ಲಿ ಒಬ್ಬ ಭಾರತೀಯರಿದ್ದಾರೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಕ ಅಧಿಕಾರಿ ಕೆ.ಜಿ.ಶಾಂತಾರಾಮ, ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾಪ್ರಶಾಂತ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾವೀರಭದ್ರಯ್ಯ ಮುಂತಾದವರು ಹಾಜರಿದ್ದರು.







