ಸಿಬ್ಬಂದಿಗಳ ವಜಾಗೆ ಸಚಿವೆ ಉಮಾಶ್ರೀ ಆಗ್ರಹ
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ
ಬೆಂಗಳೂರು, ಜು.11: ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್‌ವೊಂದರಲ್ಲಿ ಕುಳಿತಿದ್ದ ಉಡುಪಿ ಮೂಲದ 15 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಆಗ್ರಹಿಸಿದ್ದಾರೆ.
ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದಿರುವ ಅವರು, ರಾಣೆಬೆನ್ನೂರು ಸಾರಿಗೆ ಘಟಕದ ಚಾಲಕ ಕಂ ನಿರ್ವಾಹಕ ರಘು ಬಡಿಗೇರ, ಹಿರೇಕೆರೂರ ಘಟಕದ ನಿರ್ವಾಹಕ ವೈ.ಸಿ.ಕಟ್ಟೇಕಾರ ಮತ್ತು ಬಸ್ ಚಾಲಕ ವಿ.ಆರ್.ಹಿರೇಮಠ ಎಂಬವರು ಮತ್ತೊಬ್ಬ ಚಾಲಕ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಮೂವರು ಬಂಧನಕ್ಕೊಳಗಾಗಿದ್ದು, ಮತ್ತೊಬ್ಬ ಪರಾರಿಯಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ.
ಇದು ಅತ್ಯಂತ ಪೈಶಾಚಿಕ ಕೃತ್ಯವಾಗಿದ್ದು, ಇಂತಹ ಕೃತ್ಯ ಎಸಗಿರುವವರನ್ನು ಅತ್ಯಂತ ಕಠಿಣವಾಗಿ ಶಿಕ್ಷಿಸಬೇಕಾದ್ದು ಅಗತ್ಯವಾಗಿದೆ. ಇಂತಹವರು ಸರಕಾರಿ ಸೇವೆಯಲ್ಲಿರುವುದು ಸೂಕ್ತವಲ್ಲ. ಆದುದರಿಂದ, ಕೂಡಲೆ ಈ ನಾಲ್ವರನ್ನು ಸೇವೆಯಿಂದ ವಜಾಗೊಳಿಸುವಂತೆ ಉಮಾಶ್ರೀ ಮನವಿ ಮಾಡಿದ್ದಾರೆ.
ಅಲ್ಲದೆ, ಇಲಾಖೆಯ ವತಿಯಿಂದ ಬಾಲಕಿಗೆ ಅಗತ್ಯ ಕಾನೂನು ಸಹಾಯ ಹಾಗೂ ಎಲ್ಲ ರೀತಿಯ ನೆರವನ್ನು ಒದಗಿಸಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಉಮಾಶ್ರೀ ಸೂಚನೆ ನೀಡಿದ್ದಾರೆ.