ಜಾಹೀರಾತಿನಲ್ಲಿ ಸಣ್ಣ ಪತ್ರಿಕೆಗಳಿಗೆ ಆದ್ಯತೆ ನೀಡಲು ಮನವಿ

ಬೆಂಗಳೂರು, ಜು.11: ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತುಗಳನ್ನು ನೀಡುವ ಮೂಲಕ ಸರಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪುವಂತೆ ಮಾಡಬೇಕು ಎಂದು ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಸ್.ಸಿದ್ದರಾಜು ತಿಳಿಸಿದ್ದಾರೆ.
ನಗರದ ಶೇಷಾದ್ರಿಪುರಂನ ವಿಶ್ವಕರ್ಮ ಸಭಾಂಗಣದಲ್ಲಿ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿರುವ ಪತ್ರಿಕೆಗಳು ಜಾಹೀರಾತುಗಳಿಲ್ಲದೆ ನಶಿಸಿ ಹೋಗುತ್ತಿವೆ. ಹೀಗಾಗಿ ಸರಕಾರಿ ಇಲಾಖೆಗಳು ತಮ್ಮ ಜಾಹೀರಾತುಗಳನ್ನು ಈ ಪತ್ರಿಕೆಗಳಿಗೆ ನೀಡಲು ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪತ್ರಿಕೆಗಳ ಸಂಪಾದಕರಿಗೆ ತಾಂತ್ರಿಕವಾದ ತರಬೇತಿ, ಅವರಿಗೆ ದೊರಕುವ ಮೂಲಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ರಾಜ್ಯಮಟ್ಟದಲ್ಲಿ ಆಯ್ದ ಪತ್ರಕರ್ತರಿಗೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ. ಮುಂದೆಯೂ ಅಕಾಡೆಮಿಯಿಂದ ಪತ್ರಕರ್ತರಿಗೆ ಈ ತರಬೇತಿ ಮುಂದುವರೆಯಲಿದೆ ಎಂದರು.
ಪತ್ರಿಕೋದ್ಯಮ ಬೆಳೆದಂತೆ ಸಮಸ್ಯೆಗಳು ಕೂಡ ಬೆಳೆಯುತ್ತಿದ್ದು, ಇವುಗಳ ಪರಿಹಾರಕ್ಕೆ ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ. ಸಣ್ಣ ಪತ್ರಿಕೆಗಳು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ.ಪ್ರಭಾಕರ್ ಮಾತನಾಡಿ, ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಆಗಸ್ಟ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಸಣ್ಣಪತ್ರಿಕೆಗಳ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಆಯೋಜಿಸಲಾಗುತ್ತದೆ. ಅನಂತರ ಶೀಘ್ರದಲ್ಲಿಯೇ ಸಣ್ಣಪತ್ರಿಕೆಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಬಿ.ಕೆ.ರವಿ ಮಾತನಾಡಿ, ಭಾರತದ ಮಾಧ್ಯಮದ ನೂರಾರು ಸಮಸ್ಯೆಗಳ ಕುರಿತು ಮಾತನಾಡಬೇಕಾದ ಅಗತ್ಯವಿದೆ. ಈ ಹಿಂದೆ ಮಾಧ್ಯಮವೆಂದರೆ ಮುದ್ರಣ ಮಾಧ್ಯಮ ಎಂಬ ಭಾವನೆಯಿತ್ತು. ಆದರೆ, ತಂತ್ರಜ್ಞಾನ ಬೆಳೆದಂತೆಲ್ಲಾ ಅದರ ಆಯಾಮಗಳು ಬದಲಾಗಿವೆ. ಮಾಧ್ಯಮವನ್ನು ಉದ್ಯಮವೆಂದು ಪರಿಗಣಿಸಬಾರದು. ಪತ್ರಕರ್ತರು ಲಾಭ ನಷ್ಟದ ಅಪೇಕ್ಷೆಯಿಲ್ಲದೆ ಸಾಮಾಜಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಬು ಪತ್ತಾರ್, ರಾಜ್ಯ ಜಿಲ್ಲಾ ಮತ್ತು ಮದ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಶ.ಮಂಜುನಾಥ, ಸಮಿತಿ ಸದಸ್ಯ ನಾಗತಿಹಳ್ಳಿ ನಾಗರಾಜ, ಉಪಾಧ್ಯಕ್ಷ ಎನ್.ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.







