ರಾಜೀವನಗರ ಮದ್ಯದಂಗಡಿ ಪರವಾನಿಗೆ ರದ್ಧತಿಗೆ ಆಗ್ರಹಿಸಿ ಧರಣಿ

ಉಡುಪಿ, ಜು.11: 80 ಬಡಗುಬೆಟ್ಟು ಗ್ರಾಮದ ರಾಜೀವನಗರದ ಜನ ವಸತಿ ಪ್ರದೇಶದಲ್ಲಿ ಆರಂಭಿಸಿರುವ ಮದ್ಯದ ಅಂಗಡಿಯ ಪರವಾನಿಗೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಜೀವನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಉಡುಪಿ ಅಜ್ಜರಕಾಡಿನಲ್ಲಿ ರುವ ಅಬಕಾರಿ ಭವನದ ಎದುರು ಧರಣಿ ನಡೆಸಿದರು.
ರಾಜೀವನಗರದಲ್ಲಿ ರಾತ್ರೋರಾತ್ರಿ ಜು.6ರಂದು ಮದ್ಯದಂಗಡಿಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಇಲ್ಲಿಯ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದಿದೆ. ಇಲ್ಲಿ ಮದ್ಯದಂಗಡಿ ತೆರೆಯದಂತೆ ಸ್ಥಳೀಯರು ಮೂರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಗ್ರಾಪಂ ಇಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಿರಲಿಲ್ಲ. ಇತ್ತೀಚೆಗೆ ಮಾಂಸಹಾರಿ ಹೊಟೇಲ್ ಆರಂಭಿಸುವುದಾಗಿ ಗ್ರಾಪಂನಿಂದ ಪರವಾನಿಗೆ ಪಡೆದು ಇದೀಗ ಮದ್ಯದಂಗಡಿಯ ಬೋರ್ಡ್ ಹಾಕುವ ಮೂಲಕ ಗ್ರಾಪಂಗೆ ವಂಚನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ದೂರಿದರು.
ಈ ಬಾರ್ ಆರಂಭಿಸಲು ಹೊಸ ಪರವಾನಿಗೆ ಸಿಗದ ಕಾರಣ ಬೇರೆ ಪರ ವಾನಿಗೆಯನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಇದಕ್ಕೆ ಅಬಕಾರಿ ಇಲಾಖೆಯ ವರು ಅನುಮತಿ ನೀಡಿದ್ದಾರೆ. ನಮ್ಮ ಹೋರಾಟವನ್ನು ಕಡೆಗಣಿಸಿ ಪರವಾನಿಗೆ ನೀಡಿರುವ ಅಬಕಾರಿ ಇಲಾಖೆಯ ಕ್ರಮ ಖಂಡನೀಯ. ಈ ಬಡಾವಣೆಯ ಶಾಂತಿ, ಸುರಕ್ಷತೆ, ಅನುಕೂಲ, ಜನರ ಮಾನಸಿಕ ಸ್ವಾಸ್ಥವನ್ನು ಗಮನಿಸಿ ಕೂಡಲೇ ಈ ಪರವಾನಿಗೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅಬಕಾರಿ ಜಿಲ್ಲಾಧಿಕಾರಿ ರೂಪಾ ಕಚೇರಿಗೆ ಆಗಮಿಸಿ ಮನವಿ ಸ್ವೀಕರಿಸುವಂತೆ ಪಟ್ಟು ಹಿಡಿದ ಗ್ರಾಮಸ್ಥರು ಸಂಜೆಯವರೆಗೆ ಅಲ್ಲೇ ಧರಣಿ ನಡೆಸಿದರು. ಬಳಿಕ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೂಪಾ, ಈ ಕುರಿತ ದಾಖಲೆಗಳನ್ನು ಪರಿಶೀಲಿಸಿ ನಾಲ್ಕು ದಿನ ಗಳ ಒಳಗಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.







