ಕೋಮುಸಂಘರ್ಷಕ್ಕೆ ಕಾಂಗ್ರೆಸ್ ಕಾರಣವಲ್ಲ: ಸಂಘಪರಿವಾರ-ಪಿಎಫ್‌ಐ ನಡುವಿನ ಸಂಘರ್ಷ- ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ
ಮಂಗಳೂರು, ಜು.11: ಜಿಲ್ಲೆಯಲ್ಲಿ ನಡೆದಿರುವ ಕೋಮು ಸಂಘರ್ಷಕ್ಕೆ ಕಾಂಗ್ರೆಸ್ ಕಾರಣವಲ್ಲ. ಇದು ಸಂಘ ಪರಿವಾರ ಮತ್ತು ಪಿಎಫ್‌ಐ ಸಂಘಟನೆಗಳ ಮಧ್ಯೆ ನಡೆದ ಸಂಘರ್ಷ. ಈ ವಿಷಯ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೂ, ಕೇಂದ್ರ ಸಚಿವ ಸದಾನಂದ ಗೌಡರಿಗೂ ತಿಳಿದಿದೆ. ಆದರೆ ಅವರು ಜನರ ದಾರಿ ತಪ್ಪಿಸುವ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ತಲೆಗೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಬಗ್ಗೆ ಸತ್ಯಾಸತ್ಯತೆ ಅರಿತಿರುವ ಸದಾನಂದ ಗೌಡರು ಕೂಲಂಕಷ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿ. ಆ ಮೂಲಕ ತಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಸಾಬೀತುಪಡಿಸಲಿ. ಜಿಲ್ಲೆಯಲ್ಲಿ ಶಾಸಕರಾಗಿ, ಸಂಸದರಾಗಿ, ಮಾಜಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಜಿಲ್ಲೆಗೆ ಇವರ ಕೊಡುಗೆ ಏನು? ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಜನರ ಮೇಲೆ ಪ್ರೀತಿ, ಅನುಕಂಪವಿದ್ದರೆ ಶಾಂತಿ ಕಾಪಾಡಲು ಮನವಿ ಮಾಡಬೇಕಿತ್ತು. ಕೋಮು ಸಂಘರ್ಷ ನಡೆಯಲು ಕಾರಣಕರ್ತರಾದವರಿಗೆ ಬುದ್ಧಿಮಾತು ಹೇಳಿ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಶ್ರಮಿಸಬೇಕಾಗಿತ್ತು. ಅದು ಬಿಟ್ಟು ಮತ್ತೆ ಉರಿಯುವ ಬೆಂಕಿಗೆ ತುಪ್ಪಹಚ್ಚುವ ಕೆಲಸಕ್ಕೆ ಕೈ ಹಾಕಿದ್ದೀರಿ. ತಾವು ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮನವಿ ಮಾಡಿ ಜನತೆಯ ಸಂಕಷ್ಟಕ್ಕೆ ನೆರವಾಗಿ ಎಂದು ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ, ಜಿಲ್ಲೆಯ ಮಂತ್ರಿಗಳು, ಶಾಸಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿ ಕಾಪಾಡಲು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅದನ್ನು ಅರಿತು ಯಾವುದೇ ಸಂಘರ್ಷಕ್ಕೆ ಕಾರಣಕರ್ತರಲ್ಲದ ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ತಮಗೆ ಶೋಭೆ ತರುವುದಿಲ್ಲ ಎಂದು ಹರೀಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.







