ರಾಜನಾಥ್ ಸಿಂಗ್ ರಿಗೆ 2019ರಲ್ಲಿ ಸೋಲಿಸುವ ಬೆದರಿಕೆಯೊಡ್ಡಿದ ಟ್ರೋಲ್ ಪಡೆ
ಅಷ್ಟಕ್ಕೂ ಗೃಹ ಸಚಿವರು ಮಾಡಿದ ಪ್ರಮಾದವಾದರೂ ಏನು ಗೊತ್ತೇ?

ತಾನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ ...
ಹೊಸದಿಲ್ಲಿ, ಜು.11: ಕಾಶ್ಮೀರಿಗಳನ್ನು “ದೇಶದ್ರೋಹಿಗಳು” ಎಂದು ನಿಂದಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಂಘಪರಿವಾರದ ಮಂದಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ರ ಟ್ವೀಟೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಮರನಾಥ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್, ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಕಾಶ್ಮೀರದ ಜನತೆಯನ್ನು ಪ್ರಶಂಸಿಸಿದ್ದರು. ಈ ಟ್ವೀಟ್ ನಿಂದ ಸದಾ ಕಾಶ್ಮೀರಿಗಳನ್ನು ಭಯೋತ್ಪಾದಕರೆಂದು ಹೀಗಳೆಯುವ ಸಂಘಪರಿವಾರದ ಮಂದಿಗೆ ಮುಖಭಂಗವಾಗಿದೆ.
ಕಾಶ್ಮೀರಿ ಜನರ ಅಂತರಂಗದಲ್ಲಿರುವ ಜಾತ್ಯತೀತ ಪ್ರಜ್ಞೆ ಮತ್ತು ಸಹಿಷ್ಣುತೆಯ ಮನೋಭಾವನೆಯನ್ನು “ಕಾಶ್ಮೀರಿಯತ್” ಎಂದು ಬಣ್ಣಿಸಲಾಗುತ್ತದೆ. ಇದೇ ಪದವನ್ನು ಉಲ್ಲೇಖಿಸಿ ರಾಜನಾಥ್ ಟ್ವೀಟ್ ಮಾಡಿದ್ದಾರೆ.
ರಾಜನಾಥ್ ಸಿಂಗ್ ರ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಟೀಕೆಗಳನ್ನು ಆರಂಭಿಸಿದ ಈ ಟ್ರೋಲ್ ಪಡೆಗಳು, 2019ರ ಚುನಾವಣೆ ದೂರವಿಲ್ಲ ಎಂದು ಬೆದರಿಸಿದ್ದಾರೆ. ಇಷ್ಟೇ ಅಲ್ಲದೆ ಕೇಂದ್ರ ಸಚಿವರ ವಿರುದ್ಧ ಟೀಕಾಪ್ರಹಾರಗಳನ್ನು ನಡೆಸಿದ್ದಾರೆ.
ತನ್ನನ್ನು “ರಾಷ್ಟ್ರೀಯವಾದಿ “ ಎಂದು ಪರಿಚಯಿಸಿಕೊಂಡ ತ್ರಿಜಾತಾ ಎನ್ನುವ ಟ್ಟಿಟ್ಟರ್ ಖಾತೆಯೊಂದು, ನೀವು ಠಾಕೂರರು ಹೌದಾ?, ಒಮ್ಮೆಯಾದರೂ ಆರೆಸ್ಸೆಸ್ ನ ಶಾಖೆಗಳಿಗೆ ಭೇಟಿ ನೀಡಿದ್ದೀರಾ?, ನಿಮ್ಮಂತಹ ಹೇಳಿಕೆಗಳನ್ನು ಆರೆಸ್ಸೆಸ್ ಎಂದಿಗೂ ಕಲಿಸುವುದಿಲ್ಲ” ಎಂದಿದೆ.
ಇನ್ನೊಂದು ಟ್ವೀಟ್ ಮಾಡಿರುವ ಇದೇ ಖಾತೆ ರಾಜನಾಥ್ ಸಿಂಗ್ ರನ್ನು “ಯಾವುದೇ ಚೇತನವಿಲ್ಲದ ವಯಸ್ಸಾದ ಅಡ್ವಾಣಿ”ಗೆ ಹೋಲಿಸಿದೆ.
ಇಷ್ಟೇ ಅಲ್ಲದೆ ಕೆಲವು ಟ್ವಿಟ್ಟರಿಗರು ರಾಜನಾಥ್ ಸಿಂಗ್ ರನ್ನು “ನಿಂದಾ ಮಾಮ” ಎಂದು ಗೇಲಿ ಮಾಡಿದ್ದಾರೆ. ಆನ್ ಲೈನ್ ಬ್ರಾಂಡಿಂಗ್ ಸಂಸ್ಥೆಯೊಂದರ ಸ್ಥಾಪಕ ಅರುಣ್ ಕುಮಾರ್ ಎಂಬಾತ ಭಗವದ್ಗೀತೆಯನ್ನು ಉಲ್ಲೇಖಿಸಿ, “ಇದು ಯುದ್ಧದ ಸಮಯವೇ ಹೊರತು ಖಂಡಿಸುವ ಸಮಯವಲ್ಲ. ಕೃಷ್ಣ ಅರ್ಜುನನೊಂದಿಗೆ ಹೋರಾಡಲು ಹೇಳಿದ್ದ. ಶಾಂತಿಗಾಗಿ ಕೌರವರನ್ನು ಖಂಡಿಸಲು ಹೇಳಿರಲಿಲ್ಲ” ಎಂದಿದ್ದಾನೆ.
ಇಷ್ಟೇ ಅಲ್ಲದೆ ಬಿಜೆಪಿ ನಾಯಕ ಬಲ್ಬೀರ್ ಪುಂಜ್ ಟ್ವೀಟ್ ಮಾಡಿದ್ದು, “ಈ ಖಂಡನೆ ಅರ್ಥಹೀನವಾದುದು. ಈ ಹೇಡಿತನದ ದಾಳಿಯ ವಾತಾವರಣವನ್ನು ಸೃಷ್ಟಿಸಿರುವುದಕ್ಕೆ ಅವರು ಜವಾಬ್ದಾರರು” ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್ “ಕಾಶ್ಮೀರಿಯತ್ ಗೆ ನಾನು ಮಹತ್ವ ನೀಡುತ್ತೇನೆ. ದೇಶದ ಎಲ್ಲಾ ಭಾಗಗಳಲ್ಲೂ ಶಾಂತಿಯನ್ನು ಕಾಪಾಡುವಂತೆ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ. ಎಲ್ಲಾ ಕಾಶ್ಮೀರಿಗಳು ಭಯೋತ್ಪಾದಕರಲ್ಲ” ಎಂದಿದ್ದಾರೆ.
ಒಂದೆಡೆ ಕೇಂದ್ರ ಸಚಿವರ ಟ್ವೀಟ್ ನಿಂದ ಮುಖಭಂಗಕ್ಕೊಳಗಾಗಿರುವ ಸಂಘ ಪರಿವಾರದ ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಕೇಂದ್ರ ಸಚಿವರ ಟ್ವೀಟ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮೊದಲಿಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ಬಲ್ಬೀರ್ ಪುಂಜ್ ನಂತರ ಉಲ್ಟಾ ಹೊಡೆದು, "ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರಿಂದ ಸಾಮಾನ್ಯ ಕಾಶ್ಮೀರಿಗಳನ್ನು ಪ್ರತ್ಯೇಕಿಸಿದ್ದಕ್ಕೆ ಅಭಿನಂದನೆಗಳು. ಭಯೋತ್ಪಾದನೆಯ ವಿರುದ್ಧ ಇಡೀ ರಾಷ್ಟ್ರವೇ ಒಂದಾಗಿದೆ” ಎಂದಿದ್ದಾರೆ.
“ಈಗಿನ ದ್ವೇಷದ ವಾತಾವರಣದಲ್ಲಿ ನಿಮ್ಮ ಮಾತುಗಳು ಹಿತವಾಗಿದೆ. ನಿಮ್ಮಿಂದ ಈ ಮಾತುಗಳನ್ನು ನಾವು ನಿರೀಕ್ಷಿಸಿದ್ದೆವು” ಎಂದು ಝಫರ್ ಸರೇಶ್ ವಾಲಾ ಎಂಬವರು ಟ್ವೀಟ್ ಮಾಡಿದ್ದಾರೆ.
“ಇದು ಅದ್ಭುತವಾದದ್ದು. ದ್ವೇಷ ಕಾರುವ ಟ್ರೋಲ್ ಗಳಿಗೆ ತಿರುಗೇಟು ನೀಡಿದ್ದಕ್ಕೆ ಹಾಗೂ ಕಾಶ್ಮೀರಿಗಳ ಬಗೆಗಿನ ನಿಲುವನ್ನು ಹೇಳಿದ್ದಕ್ಕೆ ನಿಮ್ಮ ಮೇಲೆ ಗೌರವವಿದೆ” ಎಂದು ನಿಧಿ ರಝ್ದಾನ್ ಎಂಬವರು ಟ್ವೀಟ್ ಮಾಡಿದ್ದಾರೆ. “ರಾಜನಾಥ್ ಸಿಂಗ್ ಇಂದು ಇಂಟರ್ ನೆಟ್ ಅನ್ನು ಗೆದ್ದಿದ್ದಾರೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.







