ಮಕ್ಕಳ ಕಳ್ಳಸಾಗಣೆ ಎಂಬ ವದಂತಿ : ನೂರಾರು ಮದ್ರಸಾ ವಿದ್ಯಾರ್ಥಿಗಳ ವಿಚಾರಣೆ

ಬೆಂಗಳೂರು, ಜು.11: ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತಿದೆ ಎನ್ನುವ ದೂರು ಕೇಳಿಬಂದ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಭಾಗದ ಮದ್ರಸಾಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ನೂರಾರು ವಿದ್ಯಾರ್ಥಿಗಳನ್ನು ನಗರದ ರೈಲ್ವೇ ಠಾಣಾ ಪೊಲೀಸರು ವಿಚಾರಣೆಗೊಳಪಡಿಸಿದರು.
ಮಂಗಳವಾರ ನಗರದ ಕೆಆರ್‌ಪುರಂ, ಕಂಟೋನ್ಮೆಂಟ್ ರೈಲ್ವೇ ನಿಲ್ದಾಣ ಠಾಣಾ ಪೊಲೀಸರು, ಸಿಸಿಬಿ ಹಾಗೂ ನಗರ ಪೊಲೀಸರು ರಾಜ್ಯದ ಶಿವಮೊಗ್ಗದ ಸಾಗರ, ಮಂಡ್ಯ, ತುಮಕೂರು ಸೇರಿ ನಾನಾ ಮದ್ರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ 160ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ಮದ್ರಸಾ ಮೌಲ್ವಿಗಳನ್ನು (ಶಿಕ್ಷಕ) ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.
ಘಟನೆ ಹಿನ್ನಲೆ: ಮದ್ರಸಾ ವಿದ್ಯಾರ್ಥಿಗಳು ರಮಝಾನ್ ಮಾಸದ ಅಂಗವಾಗಿ ಉತ್ತರ ಭಾರತದಲ್ಲಿರುವ ತಮ್ಮ ಗ್ರಾಮಗಳಿಗೆ ಹೋಗಿದ್ದರು. ಪುನಃ ಮದ್ರಸಾಕ್ಕೆ ವಾಪಸ್ಸು ಬರಲು ರವಿವಾರ ರಾತ್ರಿ ಗುವಾಹಟಿ ಎಕ್ಸ್‌ಪ್ರೆಸ್ ರೈಲು ಮೂಲಕ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದರು.
ಸೋಮವಾರ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಿವನಂದನಾಯಕ್ ಎಂಬಾತ ಇಷ್ಟೊಂದು ವಿದ್ಯಾರ್ಥಿಗಳ ಸಂಖ್ಯೆ ನೋಡಿ ಅಕ್ರಮವಾಗಿ ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದ್ದಿಯೇ ಎನ್ನುವ ಅನುಮಾನದಿಂದ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಮಂಗಳವಾರ ಬೆಳಗ್ಗೆಯಿಂದಲೇ ಕಾದುಕುಳಿತ ಪೊಲೀಸರು ಮೊದಲ ಹಂತವಾಗಿ ಕಾರ್ಯಾಚರಣೆ ನಡೆಸಿ ಕೆ.ಆರ್.ಪುರಂ ರೈಲ್ವೇ ನಿಲ್ದಾಣದಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ, ಕಂಟೋನ್ಮೆಂಟ್ ರೈಲ್ವೇ ನಿಲ್ದಾಣ ಪೊಲೀಸರು 90ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದರು.
ಬಾಂಗ್ಲಾದೇಶ ಎಂದು ಅಪಪ್ರಚಾರ: ಮದ್ರಸಾ ವಿದ್ಯಾರ್ಥಿಗಳು ಟೋಪಿ ಹಾಕಿದ್ದ ಹಿನ್ನಲೆಯಲ್ಲಿ ಬಾಂಗ್ಲಾದೇಶದ ಗಡಿ ಭಾಗದಿಂದ ಅಕ್ರಮವಾಗಿ ಬಂದಿದ್ದಾರೆ ಎಂದು ಅಪಪ್ರಚಾರ ಮಾಡಲಾಯಿತು. ದೃಶ್ಯ ಮಾಧ್ಯಮಗಳು ಕೂಡ ಅಕ್ರಮ ಮಾನವ ಸಾಗಣೆ ಎಂಬಂತೆ ಬಿಂಬಿಸಿ ಸುದ್ದಿ ಬಿತ್ತರಿಸಿದವು. ಬಳಿಕ ವಿದ್ಯಾರ್ಥಿಗಳು ಸ್ಪಷ್ಟ ವಿಳಾಸ, ಗುರುತಿನ ಚೀಟಿ, ಸ್ಥಳೀಯ ಭಾಷೆ ಮಾತನಾಡಿದ ಬಳಿಕ ನಮ್ಮವರೆಂದು ಗೊತ್ತಾಯಿತು. ತದನಂತರ ನಗರದ ಪೂರ್ವ ವಲಯ ಡಿಸಿಪಿ ಅಜೇಯ್ ಹಿಲೋರಿ ಮತ್ತು ರೈಲ್ವೇ ಇಲಾಖೆ ಎಸ್ಪಿ ಚೈತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಖಚಿತ ಪಡಿಸಿದ ಐಡಿ ಕಾರ್ಡ್: ಮದ್ರಸಾ ವಿದ್ಯಾರ್ಥಿಗಳ ಬಳಿ ಆಧಾರ್ ಗುರುತಿನ ಚೀಟಿ ಇದ್ದ ಹಿನ್ನಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿಲ್ಲ ಎಂದು ತಿಳಿದುಬಂದಿದ್ದು, ಕೆಲ ವಿದ್ಯಾರ್ಥಿಗಳ ಪೋಷಕರ ವಿಳಾಸ ಪಡೆದು, ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕ್ಕಳ ಬಗ್ಗೆ ಪರಿಪೂರ್ಣ ತನಿಖೆ ನಡೆಸಿದಾಗ ಅವರೆಲ್ಲ ತುಮಕೂರು, ಶಿವಮೊಗ್ಗ, ಮೈಸೂರು ಮತ್ತು ಬೆಂಗಳೂರಿನ ಮದ್ರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಎಂದು ತಿಳಿದುಬಂದಿದೆ. ಗುರುತಿನ ಚೀಟಿಯಿಲ್ಲದ 23 ಮಕ್ಕಳಿಗೆ ತಾಲೂಕು ದಂಢಾದಿಕಾರಿಗಳು ಬರೆದು ಕೊಟ್ಟಿರುವ ಪತ್ರಗಳ ದಾಖಲೆಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತೋರಿಸಿದ್ದಾರೆ. ಶಾಸಕರಾದ ಝಮೀರ್ ಮತ್ತು ರಿಜ್ವಾನ್ ಸ್ಥಳಕ್ಕೆ ಭೇಟಿ ನೀಡಿ, ವಾತಾವರಣವನ್ನು ತಿಳಿಗೊಳಿಸಿದ್ದಾರೆ. ತದನಂತರ ಮಕ್ಕಳು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಕೆಎಸ್ಸಾರ್ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಿ ಈ ಮೂಲಕ ಮಕ್ಕಳನ್ನು ಕಳುಹಿಸಲಾಯಿತು.
ಟೋಪಿ ನೋಡಿಯೇ ಹಿಡಿದರು..!
‘ನಾವೆಲ್ಲಾ ಮದ್ರಸಾದಲ್ಲಿಯೇ ಓದುತ್ತಿದ್ದೇವೆ. ನೂರಾರು ವಿದ್ಯಾರ್ಥಿಗಳು ಟೋಪಿ ಹಾಕಿದ್ದರಿಂದಲೇ ಕೆಲವರು ಬಾಂಗ್ಲಾದೇಶದವರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ನಾವು ಕರ್ನಾಟಕದವರೆ ಎಂದು ಸಾಗರದ ಮದ್ರಸಾ ವಿದ್ಯಾರ್ಥಿ ನದೀಮ್ ಹೇಳಿದರು.







