ಶವಯಾತ್ರೆಯ ವೇಳೆ ಹೊರ ರಾಜ್ಯದವರು ಸೇರಿಕೊಂಡು ಕಲ್ಲು ತೂರಾಟ: ಭಜರಂಗದಳ ಜಿಲ್ಲಾಧ್ಯಕ್ಷ ಭಾಸ್ಕರ ಧರ್ಮಸ್ಥಳ
ಪುತ್ತೂರು, ಜು. 11: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವ ಪ್ರಯತ್ನವನ್ನು ಬಿಟ್ಟು ಹಿಂದೂ ಸಂಘಟನೆಗಳ ನಾಯಕರ ಹಿಂದೆ ಬಿದ್ದು, ಹಿಂದು ಮುಖಂಡರಗಳ ಮನೆಗೆ ಧಾಳಿ ನಡೆಸಿ ಅವರನ್ನು ಬಂಧಿಸುವ ಕೆಲಸವಾದಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭಜರಂಗದಳ ಜಿಲ್ಲಾಧ್ಯಕ್ಷ ಭಾಸ್ಕರ ಧರ್ಮಸ್ಥಳ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಜು.8ರಂದು ಶರತ್ ಮಡಿವಾಳರ ಶವಯಾತ್ರೆ ನಡೆದ ಸಂದರ್ಭದಲ್ಲಿ ಅನ್ಯಧರ್ಮೀಯರಲ್ಲದೆ ಹೊರ ರಾಜ್ಯದವರು ಸೇರಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಈ ಪ್ರಕರಣವನ್ನು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದ ಅವರು ಶವಯಾತ್ರೆಯ ವೇಳೆ ನಮ್ಮ ಕಡೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದವರು ಸ್ಪಷ್ಟಪಡಿಸಿದರು.
ಹೊರ ರಾಜ್ಯದವರು ಬಂದು ಸಚಿವ ರಮಾನಾಥ ರೈವರ ಕ್ಷೇತ್ರದಲ್ಲಿ ಗಲಾಟೆ ಎಬ್ಬಿಸುತ್ತಿದ್ದಾರೆ. ಆದರೆ ಸಚಿವ ರಮಾನಾಥ ರೈವರಿಗೆ ಇದು ಕಾಣುತ್ತಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಿ, ಹಿಂದೂ ಮುಖಂಡರನ್ನು ಬಂಧಿಸಿ ಎಂದು ಹೇಳುವ ರೈಯವರು ಶರತ್ ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಎಂದು ಹೇಳುವ ಧೈರ್ಯ ಯಾಕೆ ಮಾಡುತ್ತಿಲ್ಲ ಎಂದವರು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಯಾಗಲು ಪೊಲೀಸ್ ಇಲಾಖೆಯೇ ಕಾರಣ ಎಂದು ತಿಳಿಸಿದ ಅವರು ಕಲ್ಲು ತೂರಾಟದ ಬಗ್ಗೆ, ಶರತ್ ಕೊಲೆ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ಮತ್ತು ಗುಪ್ತಚರ ಇಲಾಖೆಗೆ ಮಾಹಿತಿ ಇರಲಿಲ್ಲವೇ, ಕೇವಲ 144 ಸೆಕ್ಷನ್ ಜಾರಿ ಮಾಡಿ ಕುಳಿತರೆ ಪೊಲೀಸ್ ಇಲಾಖೆಯ ಜವಾಬ್ದಾರಿ ಮುಗಿಯುತ್ತದೆಯೇ ಎಂದವರು ಪ್ರಶ್ನಿಸಿದರು.
ಪೊಲೀಸ್ ಇಲಾಖೆ ಗುಪ್ತ ಮಾಹಿತಿ ಸಂಗ್ರಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಎಲ್ಲಾ ಮುಗಿದ ಬಳಿಕ ಶಾಂತಿ ಸಭೆಗೆ ಮುಂದಾಗಿದೆ ಎಂದು ದೂರಿದ ಅವರು ಈ ಕೆಲಸವನ್ನು ಮೊದಲೇ ಮಾಡಿದ್ದರೆ ಇಂತಹ ಘಟನೆಯನ್ನು ತಪ್ಪಿಸಬಹುದಿತ್ತು ಎಂದರು.
ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಶರತ್ ಮಡಿವಾಳರ ಹತ್ಯೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಬಿಟ್ಟು ಹಿಂದು ನಾಯಕರನ್ನು ಬಂಧಿಸುವ ಕೆಲಸಕ್ಕೆ ಮುಂದಾಗಿದೆ. ಇದನ್ನು ಬಿಟ್ಟು ಕೊಲೆ ಆರೋಪಿಗಳನ್ನು ಬಂಧಿಸಬೇಕು. ಹಿಂದು ಮುಖಂಡರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಎಂದವರು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಭಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಶ್ರೀಧರ್ ತೆಂಕಿಲ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.







