ಪಕ್ಷದ ಪ್ರಚಾರಕ್ಕೆ, ಬೇರೆ ಪಕ್ಷಗಳ ಅಪಪ್ರಚಾರಕ್ಕೆ ತಿರುಚಿದ ವಿಡಿಯೋ, ಪಾವತಿ ಟ್ವೀಟ್ ಗಳ ಕಾರ್ಯತಂತ್ರ
ಬಿಜೆಪಿಯ ಐಟಿ ವಿಭಾಗದ ಹಿಂದಿನ ಕುತಂತ್ರ ಬಯಲು ಮಾಡಿದ ಧ್ರುವ್ ರತಿ

ಹೊಸದಿಲ್ಲಿ, ಜು.11: ಬೇರೆ ಪಕ್ಷಗಳ ಅಪಪ್ರಚಾರಕ್ಕೆ ಹಾಗೂ ತನ್ನ ಸಾಧನೆಗಳನ್ನು ಪ್ರಚಾರಪಡಿಸಲು ತಿರುಚಿದ ವಿಡಿಯೋ, ಪಾವತಿ (ಪೇಯ್ಡ್) ಟ್ವೀಟ್, ಟ್ರೆಂಡ್ ಗಳು ಮತ್ತು ಸುದ್ದಿಗಳನ್ನು ಬಳಸಿಕೊಂಡು ಬಿಜೆಪಿಯ ಐಟಿ ವಿಭಾಗ ಹೇಗೆ ಕಾರ್ಯತಂತ್ರ ರೂಪಿಸುತ್ತದೆ ಎನ್ನುವ ಮಾಹಿತಿಯನ್ನು “ಇಂಡಿಯಾ ರೆಸಿಸ್ಟ್ಸ್” ಫೇಸ್ಬುಕ್ ಪೇಜ್ ನ ಧ್ರುವ್ ರತಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಾಕ್ಷ್ಯಾಧಾರಗಳ ಸಹಿತ ಬಿಜೆಪಿ ಐಟಿ ವಿಭಾಗದ ಕಾರ್ಯತಂತ್ರವನ್ನು ಬಹಿರಂಗಪಡಿಸಿರುವ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರ ಸಾರಾಂಶ ಹೀಗಿದೆ....
"ಯಾವುದೇ ಒಂದು ಪಕ್ಷದ ಐಟಿ ವಿಭಾಗ ಆ ಪಕ್ಷದ ಜಾಹೀರಾತು ಹಾಗೂ ಮಾರ್ಕೆಟಿಂಗ್ ಗಾಗಿ ಬಳಸಲ್ಪಡುತ್ತದೆ. ಆ ಪಕ್ಷದ ಸಾಧನೆಯನ್ನು ಪ್ರಚಾರಪಡಿಸಲು ಹಾಗೂ ವಿಪಕ್ಷಗಳನ್ನು ಟೀಕಿಸಲು ಈ ಘಟಕಗಳು ಕಾರ್ಯಾಚರಿಸುತ್ತದೆ. ಆದರೆ ಬಿಜೆಪಿಯ ಐಟಿ ವಿಭಾಗದ ಪ್ರಮುಖ ಕೆಲಸವೇ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವುದಾಗಿದೆ. ಫೋಟೊಶಾಪ್ ನಲ್ಲಿ ಕ್ರಿಯೇಟ್ ಮಾಡಲಾಗುವ ನಕಲಿ ಚಿತ್ರಗಳ ಮೂಲಕ ಪಕ್ಷದ ಸಾಧನೆಯನ್ನು ಪ್ರಚಾರ ಮಾಡಲಾಗುತ್ತದೆ. ಇತರ ಪಕ್ಷಗಳನ್ನು ಟೀಕಿಸಲು ನಕಲಿ ವಿಡಿಯೋಗಳು, ಪೇಯ್ಡ್ ಟ್ವಿಟ್ಟರ್ ಟ್ರೆಂಡ್ ಗಳು ಹಾಗೂ ಪೇಯ್ಡ್ ಸುದ್ದಿಗಳ ಮೊರೆ ಹೋಗುತ್ತದೆ" ಎಂದವರು ಹೇಳಿದ್ದಾರೆ.
"ಮೊದಲಿಗೆ ಪೇಯ್ಡ್ ಟ್ವಿಟ್ಟರ್ ಟ್ರೆಂಡ್ ಗಳನ್ನು ಗಮನಿಸುವುದಾದರೆ ಒಂದೊಂದು ಟ್ವೀಟ್ ಗಳಿಗೂ ಜನರಿಗೆ ಹಣ ನೀಡಲಾಗುತ್ತದೆ, ಮೊದಲ ಬಾರಿಗೆ ಈ ಟ್ವೀಟ್ ಗಳನ್ನು ಗಮನಿಸುವಾಗ ಇವರು ಬಿಜೆಪಿ ಬೆಂಬಲಿಗರು ಅಥವಾ ಕಾರ್ಯಕರ್ತರು ಎಂದೆನಿಸುತ್ತದೆ. ಆದರೆ ವಾಸ್ತವವಾಗಿ ಪೇಯ್ಡ್ ಟ್ವಿಟ್ಟರ್ ಟ್ರೆಂಡ್ ಗಳಿಗಾಗಿ ಬಿಜೆಪಿಯ ಐಟಿ ವಿಭಾಗ “ಪಿಯಾ” ಕಂಪೆನಿಯನ್ನು ಬಳಸುತ್ತದೆ. ಈ ಕಂಪೆನಿಗಾಗಿ ಕೆಲಸ ಮಾಡುವವರನ್ನು “ಇನ್ ಫ್ಲುಯೆನ್ಸರ್” ಎನ್ನಲಾಗುತ್ತದೆ. ಪ್ರತಿ ಇನ್ ಫ್ಲುಯೆನ್ಸರ್ ಟ್ವೀಟ್ ಮಾಡಬೇಕಾದ ಸಮಯ ಹಾಗೂ ಹ್ಯಾಶ್ ಟ್ಯಾಗನ್ನು ಇಮೇಲ್ ಮಾಡಲಾಗುತ್ತದೆ. ಪ್ರತಿ ಟ್ವಿಟ್ಟರ್ ಕ್ಯಾಂಪೇನ್ ಗಾಗಿ ಅವರಿಗೆ 50ರಿಂದ 70 ರೂ. ನೀಡಲಾಗುತ್ತದೆ".
ಇಂತಹದ್ದೇ ಇ-ಮೇಲ್ ಒಂದು ಧ್ರುವ್ ಅವರಿಗೂ ಸಿಕ್ಕಿದ್ದು, ಟ್ವೀಟ್ ಮಾಡಬೇಕಾದ ಸಮಯ, ಹ್ಯಾಶ್ ಟ್ಯಾಗ್, ಹಾಗೂ ಸ್ಯಾಂಪಲ್ ಟ್ವೀಟ್ ಗಳನ್ನು ನೀಡಲಾಗುತ್ತದೆ. ಅವರು ಸೂಚಿಸಿದ ಅವಧಿಯಲ್ಲಿ ಟ್ವೀಟ್ ಮಾಡಿದರೆ ಇಂತಿಷ್ಟು ಹಣ ಸಿಗುತ್ತದೆ ಎಂದೂ ಹೇಳಲಾಗುತ್ತದೆ. ಇದಕ್ಕಾಗಿ ಕಾರ್ಪೊರೇಟ್ ಉದ್ಯೋಗಿಗಳು ಹಾಗೂ ಕೆಲ ಬಾಲಿವುಡ್ ಸ್ಟಾರ್ ಗಳನ್ನು ಬಿಜೆಪಿ ಐಟಿ ವಿಭಾಗ ಬಳಸುತ್ತದೆ ಎಂದು ಧ್ರುವ್ ಹೇಳಿದ್ದಾರೆ.
"ಈ ಕಂಪೆನಿಗಾಗಿ ಕೆಲಸ ಮಾಡುವವರಿಗಾಗಿ ಟ್ವಿಟ್ಟರ್ ನಲ್ಲಿ ವಿವಿಧ ಹೆಸರುಗಳನ್ನು ನೀಡಲಾಗುತ್ತದೆ. ಅವರ ಒಂದೆರಡು ಟ್ವೀಟ್ ಗಳನ್ನು ಗಮನಿಸುವಾಗಲೇ ಇದು ಅರ್ಥವಾಗುತ್ತದೆ. ಇವರು ಮಾಡುವಂತೆ ಟ್ವೀಟ್ ಗಳು ಒಂದೇ ರೀತಿಯ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಗಳಲ್ಲಿ ನಿರ್ಧರಿತ ಸಮಯದಲ್ಲಾಗಿರುತ್ತದೆ. "ರೆಡ್ ಲಿಪ್ ಸ್ಟಿಕ್" ಎನ್ನುವ ಟ್ವಿಟ್ಟರ್ ಖಾತೆಯ ಮೂಲಕ ಈ ಎಲ್ಲಾ ಮೇಲ್ ಗಳು ಬರುತ್ತವೆ. ಯುವತಿಯೋರ್ವಳ ಫೋಟೊ ಇರುವ ಈ ಖಾತೆಯ ಡಿಸ್ಕ್ರಿಪ್ಶನ್ ನಲ್ಲೇ “ಇನ್ ಫ್ಯುಯೆನ್ಸರ್” ಎಂದು ಬರೆದಿದೆ. ಈ ಖಾತೆಯ ಯಾವುದೇ ಟ್ವೀಟನ್ನು ಗಮನಿಸಿದರೂ ಇದು ಪೇಯ್ಡ್ ಟ್ವೀಟ್ ಗಳು ಎನ್ನುವುದು ಅರ್ಥವಾಗುತ್ತದೆ".
"ಇದರ ನಂತರ ಬಿಜೆಪಿ ಐಟಿ ವಿಭಾಗದಲ್ಲಿ ಅತೀ ಹೆಚ್ಚು ಬಳಸಲ್ಪಡುವುದು ನಕಲಿ ಫೊಟೊಶಾಪ್ ಚಿತ್ರಗಳು. ಇಂತಹ ನಕಲಿ ಫೋಟೊಶಾಪ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತದೆ. ಇಂತಹ ನಗು ತರಿಸುವ ಚಿತ್ರಗಳನ್ನು ಹಲವರು ಸತ್ಯಾಸತ್ಯತೆ ಅರಿಯದೆ ನಂಬುತ್ತಾರೆ. ಮತ್ತೊಂದು ಪ್ರಕಾರದಲ್ಲಿ ಪ್ರಸಿದ್ಧ ವ್ಯಕ್ತಿಗಳ ಮಾತುಗಳು ಎಂದು ಫೋಟೊಶಾಪ್ ಚಿತ್ರಗಳನ್ನು ಶೇರ್ ಮಾಡಲಾಗುತ್ತದೆ. ಇವುಗಳು ಮೋದಿ ಹಾಗು ಬಿಜೆಪಿ ಸರಕಾರವನ್ನು ಪ್ರಶಂಸಿಸಿರುವುದಾಗಿರುತ್ತದೆ. ವಾಸ್ತವವಾಗಿ ಪ್ರಸಿದ್ಧ ವ್ಯಕ್ತಿಗಳು ಈ ಮಾತುಗಳನ್ನೇ ಹೇಳಿರುವುದಿಲ್ಲ!" ಎಂದವರು ಹೇಳಿದ್ದಾರೆ.

"ಬಿಜೆಪಿಯನ್ನು ಹೊಗಳಲು ಹಾಗು ಇತರ ಪಕ್ಷಗಳನ್ನು ಟೀಕಿಸಲೂ ಸಹ ಇಂತಹ ಚಿತ್ರಗಳು ಬಳಕೆಯಾಗುತ್ತದೆ. ಈ ಕೆಳಗಿನ ಚಿತ್ರವನ್ನು ಗಮನಿಸುವುದಾದರೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಆಮ್ ಆದ್ಮಿ ಕಾರ್ಯಕರ್ತನ ಫೋಟೊ ಇದಾಗಿದೆ. ಆದರೆ ಬಿಜೆಪಿ ಪೇಜ್ ನಲ್ಲಿ ಈತ ಬಿಜೆಪಿ ಕಾರ್ಯಕರ್ತನಾಗಿದ್ದು, ಆಮ್ ಆದ್ಮಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಪ್ರಚಾರ ಮಾಡಲಾಗಿತ್ತು. ಇಂತಹ ಕೆಲಸಗಳನ್ನು ಬಿಜೆಪಿಯ ಐಟಿ ವಿಭಾಗ ವಿಡಿಯೋಗಳಲ್ಲೂ ನಡೆಸುತ್ತದೆ. ಒಂದು ವಿಡಿಯೋಗೆ ಮತ್ತೊಂದರ ಆಡಿಯೋ ಸೇರಿಸಿ ತಮ್ಮ ಕಾರ್ಯ ಸಾಧಿಸಲಾಗುತ್ತದೆ."

ಬಿಜೆಪಿ ಐಟಿ ವಿಭಾಗದ ಸ್ಥಾಪಕ ಪ್ರೊದ್ಯುತ್ ಬೋರಾನನ್ನು ಪಕ್ಷವು ಹೊರಹಾಕಿತ್ತು. ಈ ಸಂದರ್ಭ ಪ್ರತಿಕ್ರಿಯೆ ನೀಡಿದ್ದ ಆತ, "ಗೆದ್ದೇ ತೀರಬೇಕೆನ್ನುವ ಹಂಬಲ ಪಕ್ಷದ ತತ್ವಗಳನ್ನು ನಾಶಗೊಳಿಸಿದೆ. 2004ರಲ್ಲಿದ್ದ ಪಕ್ಷ ಇದಲ್ಲ” ಎಂದಿದ್ದ.
"ಈ ನಡುವೆ ರಾಷ್ಟ್ರೀಯವಾದ ಹಾಗೂ ಹಿಂದುತ್ವದ ಭಾವನೆಗಳನ್ನು ಬಳಸಿಕೊಂಡು ವಾಟ್ಸ್ಯಾಪ್ ನಲ್ಲಿ ಸಂದೇಶಗಳನ್ನು ಫಾರ್ವರ್ಡ್ ಮಾಡುವುದು ಹಾಗೂ ಫೇಸ್ಬುಕ್ ನಲ್ಲಿ ಕೆಲ ಪೇಯ್ಡ್ ಪೇಜ್ ಗಳನ್ನು ರಚಿಸುವುದನ್ನೂ ಈ ವಿಭಾಗ ಶುರುವಿಟ್ಟುಕೊಂಡಿತ್ತು. ಈ ಪೇಜ್ ಗಳಲ್ಲಿ “ಫ್ರಸ್ಟೇರೆಡ್ ಇಂಡಿಯನ್”, “ಸತ್ಯ ವಿಜಯಿ”, “ಜಾಗ್ರೂಕ್ ಭಾರತ್ ಡಾಟ್ ಕಾಂ”, “ಪ್ರೆಸ್ಟಿಟ್ಯೂಟ್ಸ್” ಪ್ರಮುಖವಾಗಿದೆ. ಇತ್ತ ಇವರ ಅಜೆಂಡಾ ಪ್ರಸಿದ್ಧವಾಗುತ್ತಿದ್ದಂತೆ ಇವುಗಳನ್ನೇ ಆಧರಿಸಿ ಕೆಲ ಮಾಧ್ಯಮಗಳು ಸುದ್ದಿ ಮಾಡುತ್ತದೆ".
"ರಸ್ತೆ ದುರಸ್ತಿಗಾಗಿ ಪ್ರಧಾನಿ ಮೋದಿಯವರು ರಾತ್ರಿ ಗಂಟೆಯ ವೇಳೆ ಐಎಎಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದರು ಎನ್ನುವ ಸುದ್ದಿಯೊಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿಯ ಮೊದಲು ಹುಟ್ಟುಹಾಕಿದ್ದು ಬಿಜೆಪಿ ಐಟಿ ವಿಭಾಗದ ಟ್ವಿಟ್ಟರ್ ಖಾತೆ. ನಂತರ, “ಫ್ರಸ್ಟೇರೆಡ್ ಇಂಡಿಯನ್” ಹಾಗೂ ಸತ್ಯ ವಿಜಯಿ ಪೋಸ್ಟ್ ಮಾಡಿತ್ತು. ನಂತರ ಸತ್ಯಾಸತ್ಯತೆಯನ್ನೂ ಅರಿಯದೆ ಬಿಜೆಪಿ ಬೆಂಬಲಿತ "ಝೀ ನ್ಯೂಸ್" ಹಾಗೂ "ಇಂಡಿಯಾ ಟಿವಿ" ಇದನ್ನು ಶೇರ್ ಮಾಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಹಲವು ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ್ದವು. ಆದರೆ ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದಾಗ ನನಗೆ ಇಂತಹ ಯಾವುದೇ ಕರೆಗಳು ಬಂದಿಲ್ಲ ಎಂದಿದ್ದರು".
"ಇಂತಹ ಯಾವುದೇ ಸುದ್ದಿಗಳು ನಕಲಿಯಾಗಿರಬಹುದು ಎನ್ನುವ ಅನುಮಾನ ಕೂಡ ಕೆಲವರಲ್ಲಿ ಮೂಡುವುದಿಲ್ಲ. ಇಂತಹವರನ್ನು ನಂಬಿಸುವುದಕ್ಕಾಗಿಯೇ ಈ ಪೇಜ್ ಗಳು ಕಾರ್ಯಾಚರಿಸುತ್ತದೆ. ಇಂತಹ ಸುದ್ದಿಗಳ ಅಸಲಿಯತ್ತೇನು ಎನ್ನುವುದನ್ನು ತಿಳಿಯಲು ಇದನ್ನು ಗೂಗಲ್ ನಲ್ಲಿ ಹುಡುಕಬೇಕು. ಕೆಲ ನಂಬಲರ್ಹ, ಉನ್ನತ ಮಾಧ್ಯಮಗಳಲ್ಲಿ ಇವುಗಳು ಪ್ರಕಟವಾಗಿದ್ದರೆ 99 ಶೇ. ಸುದ್ದಿಯನ್ನು ನಂಬಬಹುದು. ಇದರ ಹೊರತು ಝೀ ನ್ಯೂಸ್, “ಫ್ರಸ್ಟೇರೆಡ್ ಇಂಡಿಯನ್”, ಸತ್ಯ ವಿಜಯಿ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಇದು ಪ್ರಕಟಗೊಂಡಿದ್ದರೆ, ಅದು 99 ಶೇ. ಸುಳ್ಳೇ ಆಗಿರುತ್ತದೆ ಎಂದು ಧ್ರುವ್ ಹೇಳುತ್ತಾರೆ.







