ಹೋಟೆಲ್‌ಗಳು ಖಾದ್ಯ ವಸ್ತುಗಳ ಬೆಲೆ ಇಳಿಸಬೇಕು : ಹಸ್‌ಮುಖ್

ಹೊಸದಿಲ್ಲಿ, ಜು.11: ಜಿಎಸ್‌ಟಿಯ ಜಾರಿಯ ನಂತರದ ಅವಧಿಯಲ್ಲಿ ರೆಸ್ಟಾರೆಂಟ್‌ಗಳು, ಹೋಟೆಲ್‌ಗಳು ಮತ್ತು ಖಾನಾವಳಿಗಳು ತಮ್ಮ ಮೆನುವಿನಲ್ಲಿ ಖಾದ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಆದಾಯ ಇಲಾಖೆಯ ಕಾರ್ಯದರ್ಶಿ ಹಸ್‌ಮುಖ್ ಅಧಿಯ ತಿಳಿಸಿದ್ದಾರೆ.
ರೆಸ್ಟಾರೆಂಟ್‌ನಲ್ಲಿ ಸೇವಾ ಶುಲ್ಕ ಸೇರಿದಂತೆ ಗ್ರಾಹಕರ ಸಂಪೂರ್ಣ ಬಿಲ್‌ನ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ. ಅಲ್ಲದೆ ಮದ್ಯದ ಮೇಲೆ ‘ವ್ಯಾಟ್’ ತೆರಿಗೆ ವಿಧಿಸಲಾಗುತ್ತದೆ ಎಂದವರು ಹೇಳಿದ್ದಾರೆ. ಈ ಹಿಂದೆ ಹೋಟೆಲ್‌ಗಳ ಬಿಲ್‌ನ ಮೇಲೆ ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ ವ್ಯವಸ್ಥೆ ಜಾರಿಗೆ ಬಂದಿದೆ. ಇದು ರೆಸ್ಟಾರೆಂಟ್, ಹೋಟೆಲ್‌ಗಳು ತಮ್ಮ ಖರೀದಿ (ಇನ್‌ಪುಟ್) ಮೇಲೆ ವಿಧಿಸಲಾಗುವ ತೆರಿಗೆಯನ್ನು ಕಡಿಮೆ ಮಾಡುವ ಕಾರಣ ಹೋಟೆಲ್‌ನವರು ಈಗ ಈ ತೆರಿಗೆಯನ್ನು ಅಂತಿಮವಾಗಿ ಗ್ರಾಹಕರ ಮೇಲೆ ಹಾಕುವಂತಿಲ್ಲ.
ಈಗ ಐಟಿಸಿ ವ್ಯವಸ್ಥೆ ಲಭ್ಯವಿರುವ ಕಾರಣ ಹೆಚ್ಚಿನ ರೆಸ್ಟಾರೆಂಟ್‌ಗಳು ತಮ್ಮ ಮೆನು ಕಾರ್ಡ್‌ನಲ್ಲಿ ಖಾದ್ಯಗಳಿಗೆ ಪರಿಷ್ಕೃತ, ಕಡಿಮೆಯಾಗಿರುವ ದರವನ್ನು ನಮೂದಿಸಬೇಕು. ಜಿಎಸ್‌ಟಿ ಜಾರಿಗೊಂಡ ಬಳಿಕ ಹೋಟೆಲ್‌ನವರು ಖರೀದಿಸುವ ಕಚ್ಚಾ ವಸ್ತುಗಳ ಮೇಲೆ ತೆರಿಗೆ ಕಡಿಮೆಯಾಗಿದೆ ಎಂದು ಅವರು ಇಲ್ಲಿ ನಡೆದ ‘ಜಿಎಸ್‌ಟಿ ಮಾಸ್ಟರ್ ಕ್ಲಾಸ್’ನಲ್ಲಿ ಪಾಲ್ಗೊಂಡು ತಿಳಿಸಿದರು.
ಜಿಎಸ್‌ಟಿಯ ಬಳಿಕ ಏರ್‌ಕಂಡಿಷನ್ ವ್ಯವಸ್ಥೆ ಇಲ್ಲದ ರೆಸ್ಟಾರೆಂಟ್‌ಗಳ ಮೇಲೆ ಶೇ.12 ತೆರಿಗೆ, ಮದ್ಯ ಸರಬರಾಜು ಮಾಡುವ ಏರ್‌ಕಂಡಿಷನ್ ವ್ಯವಸ್ಥೆ ಇರುವ ರೆಸ್ಟಾರೆಂಟ್‌ಗಳ ಮೇಲೆ ಶೇ.18 ತೆರಿಗೆ ವಿಧಿಸಲಾಗುತ್ತದೆ. ಮದ್ಯ ಹೊರತುಪಡಿಸಿ, ರೆಸ್ಟಾರೆಂಟ್‌ನಲ್ಲಿ ಸರಬರಾಜು ಮಾಡುವ ಮತ್ತು ಬಿಲ್‌ನಲ್ಲಿ ಸೇರಿಸಲಾಗುವ ವಸ್ತುಗಳಿಗೆ ಜಿಎಸ್‌ಟಿ ಅನ್ವಯಿಸುತ್ತದೆ(ಮದ್ಯದ ಮೇಲೆ ವ್ಯಾಟ್ ವಿಧಿಸಲಾಗುತ್ತದೆ).ಸೇವಾ ತೆರಿಗೆ ಸೇರಿದ ಸಂಪೂರ್ಣ ಬಿಲ್ ಮೇಲೆ ಜಿಎಸ್‌ಟಿ ವಿಧಿಸಲಾಗುವುದು ಎಂದವರು ವಿವರಿಸಿದರು.
ಜಿಎಸ್‌ಟಿ ಕರಾರಿನಂತೆ, ಈಗಾಗಲೇ ಕೇಂದ್ರ ಉತ್ಪಾದನಾ ಸುಂಕ ಪಾಲಿಸಿದ ಕಾರುಗಳಿಗೆ ಐಟಿಸಿ ಸೌಲಭ್ಯ ದೊರಕುವುದಿಲ್ಲ. ಇದನ್ನು ಮರುಪರಿಶೀಲಿಸುವಂತೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ ಎಂದವರು ಹೇಳಿದರು.







