ಎಸ್‌ಬಿಐ ಉಳಿತಾಯ ಖಾತೆ: ಕನಿಷ್ಟ ಶಿಲ್ಕು, ಎಟಿಎಂ ಹಣ ಹಿಂಪಡೆಯುವ ನಿಯಮ

ಹೊಸದಿಲ್ಲಿ, ಜು.11: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಉಳಿತಾಯ ಖಾತೆಯಲ್ಲಿರಬೇಕಾದ ಮಿನಿಮಮ್ ಬ್ಯಾಲೆನ್ಸ್(ಕನಿಷ್ಠ ಶಿಲ್ಕು) ಮತ್ತು ಎಟಿಎಂನಿಂದ ಹಣ ಹಿಂಪಡೆಯುವ ನಿಯಮಗಳ ವಿವರ ಹೀಗಿದೆ : ಉಳಿತಾಯ ಖಾತೆಯಲ್ಲಿ ತಿಂಗಳಿಗೆ ಕನಿಷ್ಠ ಶಿಲ್ಕು(ಮಿನಿಮಮ್ ಬ್ಯಾಲೆನ್ಸ್) ಇರದ ಗ್ರಾಹಕರ ಮೇಲೆ 100 ರೂ. ದಂಡ(ಶೇ.18 ಜಿಎಸ್‌ಟಿ ಸೇರಿ) ವಿಧಿಸಲಾಗುತ್ತದೆ.
ಎಸ್‌ಬಿಐಯ ಪಟ್ಟಣ, ನಗರ ಪ್ರದೇಶ, ಅರೆ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳ ಶಾಖೆಗಳಲ್ಲಿರುವ ಗ್ರಾಹಕರಿಗೆ ವಿಧಿಸಲಾಗುವ ದಂಡದ ಪ್ರಮಾಣದಲ್ಲಿ ವ್ಯತ್ಯಾಸವಿದೆ.
ಕನಿಷ್ಠ ಶಿಲ್ಕಿನ ಪ್ರಮಾಣದಲ್ಲಿ ಇರುವ ಕೊರತೆಯ ಆಧಾರದಲ್ಲಿ ದಂಡ ವಿಧಿಸಲಾಗುತ್ತದೆ. ಪಟ್ಟಣ ಪ್ರದೇಶದ ಶಾಖೆಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು 5,000 ರೂ. ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು. ಇದು ಶೂನ್ಯದಿಂದ 1,500ರೂ. ವರೆಗೆ ಇದ್ದರೆ 100 ರೂ., ಜೊತೆಗೆ ತೆರಿಗೆ ವಿಧಿಸಲಾಗುತ್ತದೆ. ಇದು 1,500 ರೂ.ಯಿಂದ 2,500 ರೂ.ವರೆಗೆ ಇದ್ದರೆ 75ರೂ., ಜೊತೆಗೆ ತೆರಿಗೆ ವಿಧಿಸಲಾಗುತ್ತದೆ. 2,500 ರೂ.ಗಿಂತ ಹೆಚ್ಚಿಗೆ ಇದ್ದರೆ ರೂ.50 ದಂಡ, ಜೊತೆಗೆ ತೆರಿಗೆ ವಿಧಿಸಲಾಗುತ್ತದೆ.
ನಗರ ಪ್ರದೇಶ, ಅರೆ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳ ಶಾಖೆಗಳಲ್ಲಿರುವ ಗ್ರಾಹಕರು ತಮ್ಮ ಖಾತೆಗಳಲ್ಲಿ ಅನುಕ್ರಮವಾಗಿ 3,000 ರೂ, 2,000 ರೂ. ಮತ್ತು 1,000 ರೂ. ಕನಿಷ್ಟ ಬ್ಯಾಲೆನ್ಸ್ ಹೊಂದಿರಬೇಕು ಎಂದು ಎಸ್‌ಬಿಐ ಪ್ರಕಟಣೆ ತಿಳಿಸಿದೆ.







