ನಗರಸಭೆ ‘ಖಾತೆ’ ಸ್ಥಗಿತದಲ್ಲಿ ಆಡಳಿತ ಪಕ್ಷದ ಪಾತ್ರವಿಲ್ಲ: ಜಯಂತಿ ಬಲ್ನಾಡು
ಪುತ್ತೂರು, ಜು.11: ಪುತ್ತೂರು ನಗರಸಭೆಯಲ್ಲಿ ಜನಸಾಮಾನ್ಯರಿಗೆ ಅಗತ್ಯವಾಗಿರುವ ‘ಖಾತೆ’ಯನ್ನು ಸ್ಥಗಿತ ಮಾಡಿರುವ ವಿಚಾರದಲ್ಲಿ ಆಡಳಿತ ಪಕ್ಷದ ಯಾವುದೇ ಪಾತ್ರವಿಲ್ಲ. ನಗರಸಭೆಯ ಕಾಂಗ್ರೆಸ್ ಆಡಳಿತಕ್ಕೆ ಕೆಟ್ಟ ಹೆಸರು ತರಲು ವಿರೋಧ ಪಕ್ಷದ ಬಿಜೆಪಿ ಸದಸ್ಯರು, ಕೆಲವು ಬ್ರೋಕರ್‌ಗಳು ಸೇರಿಕೊಂಡು ಪೌರಾಯುಕ್ತರನ್ನು ಬಳಸಿಕೊಂಡು ನಮಗೆ ಕೆಟ್ಟ ಹೆಸರು ತರಲು ಈ ಷಡ್ಯಂತ್ರ ನಡೆಸುತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಪ್ರಸನ್ನ ಎಂಬವರ ಹುನ್ನಾರವೂ ಇದರಲ್ಲಿ ಸೇರಿಕೊಂಡಿದೆ ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಹಾಗೂ ಆಡಳಿತ ಪಕ್ಷದ ಹಿರಿಯ ಸದಸ್ಯ ಮಹಮ್ಮದ್ ಆಲಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ನೀಡಿದ ಆದೇಶದಲ್ಲಿ ಅಕ್ರಮ ನಿವೇಶನಗಳಿಗೆ ಮಾತ್ರ ಖಾತೆ ನೀಡಬಾರದು ಎಂದು ಉಲ್ಲೇಖಿಸಲಾಗಿದೆ ವಿನಹ ಮನೆ ಇದ್ದ ನಿವೇಶನಗಳಿಗೆ ಖಾತೆ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸರ್ಕಾರ ನೀಡಿದ ಆದೇಶವನ್ನು ತಿರುಚಿಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಪ್ರಸನ್ನ ಎಂಬವರು ಈ ಆದೇಶವನ್ನು ತಿರುಚಿ ಸುತ್ತೋಲೆ ನೀಡಿರುವುದೇ ಗೊಂದಲಕ್ಕೆ ಮೂಲ ಕಾರಣವಾಗಿದೆ. ಈ ಸುತ್ತೋಲೆ ಪುತ್ತೂರು ನಗರಸಭೆಗೆ ಮಾತ್ರ ನೀಡಿದ್ದು, ಸುತ್ತೋಲೆಯಲ್ಲಿ ಜಿಲ್ಲೆಯ ಎಲ್ಲಾ ಪಟ್ಟಣ ಪಂಚಾಯತ್ ಹಾಗೂ ನಗರಸಭೆಗಳಿಗೆ ಕಳುಹಿಸಿರುವುದಾಗಿ ತಿಳಿಸಲಾಗಿದೆ. ಆದರೆ ಪುತ್ತೂರು ನಗರಸಭೆ ಹೊರತು ಪಡಿಸಿ ಉಳಿದ ಯಾವುದೇ ನಗರಸಭೆ, ಪಟ್ಟಣ ಪಂಚಾಯತ್‌ಗಳಿಗೆ ಈ ಸುತ್ತೋಲೆ ಮುಟ್ಟಿಯೇ ಇಲ್ಲ. ಉದ್ದೇಶ ಪೂರ್ವಕವಾಗಿ ಪುತ್ತೂರಿಗೆ ಮಾತ್ರ ಈ ಸುತ್ತೋಲೆ ಕಳುಹಿಸಿ ಆಡಳಿತ ಪಕ್ಷದ ಮೇಲೆ ಕೆಟ್ಟ ಹೆಸರು ತರುವುದು ಈ ಅಧಿಕಾರಿಯ ಹುನ್ನಾರವಾಗಿದೆ ಎಂದು ಅವರು ತಿಳಿಸಿದರು.
ಈ ಆದೇಶವನ್ನು ಮುಂದಿಟ್ಟುಕೊಂಡು ಇದೀಗ ನಗರಸಭೆಯ ಪೌರಾಯುಕ್ತೆ ಖಾತೆ ನೀಡುವುದನ್ನು ಸ್ಥಗಿತಗೊಳಿಸಿದ್ದಾರೆ. ಕಾನೂನಿನ ಜ್ಞಾನವೇ ಇಲ್ಲದ ಪೌರಾಯುಕ್ತರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ತಿಳಿಸಿದರು. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಯೋಜನಾಧಿಕಾರಿ ಪ್ರಸನ್ನ ಹಾಗೂ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರ ವಿರುದ್ಧ ಈಗಾಗಲೇ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರಿಗೂ ಈ ಬಗ್ಗೆ ಮನವಿ ನೀಡಲಾಗಿದೆ ಎಂದು ತಿಳಿಸಿದರು.
ಪುರಭವನ ಬಾಡಿಗೆ ಹೆಚ್ಚಳವಿಲ್ಲ
ಪುತ್ತೂರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಅನುಕೂಲವಾಗಬೇಕಿದ್ದ ಪುರಭವನ ಕಳೆದ 25 ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿಯೇ ಉಳಿದಿತ್ತು. ಪುರಭವನದ ಬಾಡಿಗೆ ಹೆಚ್ಚಳ ಮಾಡಬೇಕೆಂದು ಈ ಹಿಂದಿನ ಸಮಿತಿ ಪ್ರಸ್ತಾವನೆ ಮಾಡಿತ್ತು. ಈ ಸಮಿತಿಯಲ್ಲಿ ನಗರಸಭೆಯ ಸದಸ್ಯರಾದ ಜೀವಂಧರ್ ಜೈನ್ ಮತ್ತು ಮಾಜಿ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ ಮತ್ತತರರಿದ್ದರು. ಆದರೆ ನಾವು ಆಡಳಿತ ಪಡೆದ ಬಳಿಕ ಈ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ.
ಆಡಳಿತ ಪಕ್ಷ ಪುರಭವನದ ನವೀಕರಣಕ್ಕೆ 56 ಲಕ್ಷ ರೂ. ಮತ್ತು ನಗರೋತ್ಥಾನ ಯೋಜನೆಯಡಿ 50 ಲಕ್ಷ ರೂ. ಅನುದಾನವಿಟ್ಟಿದೆ. ಆದರೆ ನಗರೋತ್ಥಾನದ ಅನುದಾನದಲ್ಲಿ ನವೀಕರಣಕ್ಕೆ ಅವಕಾಶ ಇಲ್ಲವಾಗಿದೆ. ಪುರಭವನವನ್ನು ಸುಂದರವನ್ನಾಗಿಸಲು ಕ್ರಮಕೈಗೊಳ್ಳಲಾಗುವುದು .ಇದಕ್ಕೆ ಇನ್ನಷ್ಟು ಹಣ ಬೇಕಾದರೂ ನಗರಸಭೆಯ ಸ್ವಂತ ಅನುದಾನದಲ್ಲಿ ನೀಡಲು ಸಿದ್ಧವಿದೆ. ಆದರೆ ಬಾಡಿಗೆ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ನಗರಸಭೆಯ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಆಡಳಿತ ಪಕ್ಷದ ಸದಸ್ಯರಾದ ಶಕ್ತಿಸಿನ್ಹಾ , ಅನ್ವರ್ ಖಾಸಿಂ, ಮುಖೇಶ್ ಕೆಮ್ಮಿಂಜೆ ಉಪಸ್ಥಿತರಿದ್ದರು.







