ಕೋಮುಗಲಭೆ ಎಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ: ಶಾಸಕಿ ಶಕುಂತಳಾ ಶೆಟ್ಟಿ ಸೂಚನೆ
ತ್ರೈಮಾಸಿಕ ಕೆಡಿಪಿ ಸಭೆ

ಪುತ್ತೂರು, ಜು. 11: ಕೋಮು ಗಲಭೆ ಎಬ್ಬಿಸುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಪ್ರಕರಣಗಳ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಗಲಭೆ ಮಾಡುವವರು ಯಾವ ಜಾತಿ, ಧರ್ಮ, ಪಕ್ಷದವರೇ ಆಗಿರಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ತಾಲೂಕು ಕೆಡಿಪಿ ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸೂಚಿಸಿದ ಶಾಸಕಿ ಶಕುಂತಳಾ ಶೆಟ್ಟಿ ಅವರು ಉಪ್ಪಿನಂಗಡಿಯ ಪುಷ್ಪಲತಾ ನಿಗೂಢ ಸಾವಿಗೆ ಮೂರು ವರ್ಷ ತುಂಬಿದೆ, ಕಕ್ಕೂರು ಸಾಮೂಹಿಕ ಹತ್ಯೆ ಘಟನೆಗೆ ಐದು ವರ್ಷವಾಗಿದೆ. ಇನ್ನೂ ಕೂಡ ತನಿಖೆ ಮುಗಿದಿಲ್ಲದಿರುವುದು ನಾಚಿಕೆಗೇಡು ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲಗಳು ಆಗಾಗ ಬೆಳಕಿಗೆ ಬರುತ್ತಿದ್ದು, ಇದರಿಂದ ಜನ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಮತದಾರರ ಪಟ್ಟಿಯಂಥ ಒಂದು ಅಧಿಕೃತ ದಾಖಲೆಯ ಮೇಲಿನ ವಿಶ್ವಾಸಾರ್ಹತೆಯೇ ಇದರಿಂದ ಹೊರಟು ಹೋಗುತ್ತದೆ. ಮತದಾರನ ಹೆಸರಿನಲ್ಲಿ, ಪೋಷಕರ ಹೆಸರಿನಲ್ಲಿ, ಅವರ ಜಾತಿ, ಧರ್ಮ ನಮೂದಿಸುವಲ್ಲಿ ತಪ್ಪಾಗುವುದು ಇಂಥ ಹಲವಾರು ಪ್ರಮಾದಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇದೆಲ್ಲ ಟೈಪ್ ಮಿಸ್ಟೇಕ್ ಆಗಲು ಸಾಧ್ಯವಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ ಎಂದ ಶಾಸಕಿ ಶಕುಂತಳಾ ಶೆಟ್ಟಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಅವರು ತಹಶೀಲ್ದಾರ್ ಅನಂತಶಂಕರ್ ಅವರಿಗೆ ಸೂಚನೆ ನೀಡಿದರು.
ಪುತ್ತೂರು - ಉಪ್ಪಿನಂಗಡಿ ಮಧ್ಯೆ ಕೋಡಿಂಬಾಡಿಯಲ್ಲಿ ಇತ್ತೀಚೆಗಷ್ಟೇ ಸುಂದರ ರಸ್ತೆ ನಿರ್ಮಾಣವಾಗಿದೆ. ಈಗ ಹೊಸ ರಸ್ತೆಯ ಪಕ್ಕದಲ್ಲೇ ಪುತ್ತೂರು ನಗರಸಭೆಯ ನೀರಿನ ಪೈಪ್‌ಲೈನ್ ತುಂಡಾಗಿ ಸಮಸ್ಯೆಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನಗರಸಭೆಯವರು ಪೈಪ್ ಸ್ಥಳಾಂತರ ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಗೋಕುಲದಾಸ್ ಅವರು ಆಪಾದಿಸಿದರು. ಇದಕ್ಕೆ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಪ್ರತಿಕ್ರಿಯಿಸಿ, ಅದು ದಶಕಗಳಷ್ಟು ಹಳೆಯ ಪೈಪ್. ಅದನ್ನು ಸ್ಥಳಾಂತರ ಮಾಡಲು ಈಗ ಕಷ್ಟವಿದೆ. ಎಡಿಬಿ ಯೋಜನೆಯ ಎರಡನೇ ಹಂತದ ನೀರು ಸರಬರಾಜು ಕಾಮಗಾರಿಗೆ 40 ಕೋಟಿ ರೂ. ಮಂಜೂರಾಗಿದೆ. ಆ ಕಾಮಗಾರಿ ಆರಂಭಗೊಂಡಾಗ ಹಳೆಯ ಪೈಪ್ ತೆಗೆದು ಹೊಸ ಪೈಪ್‌ಲೈನ್ ಅಳವಡಿಸಲಾಗುತ್ತದೆ ಎಂದರು.
ಇದಕ್ಕೆ ತೃಪ್ತರಾಗದ ಶಾಸಕರು, ನಿಮ್ಮ 40 ಕೋಟಿ ರೂ. ಮಂಜೂರಾಗುವಾಗ ಎಷ್ಟು ವರ್ಷವಾಗುತ್ತದೋ ಗೊತ್ತಿಲ್ಲ. ಅದಕ್ಕೆ ಕಾದು ನಮ್ಮ ರಸ್ತೆ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. ಪುತ್ತೂರು ಮತ್ತು ಉಪ್ಪಿನಂಗಡಿ ಮಧ್ಯೆ ಪೂರ್ತಿ ರಸ್ತೆ ಅಗಲೀಕರಣ ಮಾಡುವುದು ನನ್ನ ಯೋಜನೆ. ಅದು ಹಂತ ಹಂತವಾಗಿ ನಡೆಯುತ್ತದೆ. ಅದಕ್ಕೆ ಮೊದಲೇ ನೀವು ಪೈಪ್‌ಲೈನ್ ಸ್ಥಳಾಂತರ ಮಾಡಿದರೆ ಉತ್ತಮ. ರಸ್ತೆ ಕಾಮಗಾರಿ ಮುಗಿದ ಮೇಲೆ ಸ್ಥಳಾಂತರ ಮಾಡಲು ಬಂದರೆ ಆಗ ನೀವು ದಂಡ ಕಟ್ಟಬೇಕಾದೀತು ಎಂದು ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದರು.
ಕುದ್ಮಾರು ಗ್ರಾಮದ ಶಾಂತಿಮುಗೇರಿನಲ್ಲಿ ಕುಮಾರಧಾರಾ ನದಿಗೆ ನಿರ್ಮಾಣವಾದ ನೂತನ ಸೇತುವೆಯ ಕಾಮಗಾರಿ ಮುಗಿದಿದ್ದರೂ ಇನ್ನೂ ಉದ್ಘಾಟನೆ ಮಾಡದೆ ವಿಳಂಬ ಮಾಡುತ್ತಿರುವುದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರು ಉತ್ತರಿಸಿ, ಉದ್ಘಾಟನೆಗೆ ಲೋಕೋಪಯೋಗಿ ಸಚಿವರನ್ನು ಕರೆಯಲು ನಿರ್ಧರಿಸಲಾಗಿದ್ದು, ಅವರ ದಿನಾಂಕಕ್ಕೆ ಕಾಯಲಾಗುತ್ತಿದೆ. ಅವರು ಬರುವುದಿಲ್ಲ ಎಂದರೆ ಮತ್ತೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡಬಹುದು ಎಂದರು.
ಸೇತುವೆಗಾಗಿ ಜಮೀನು ಬಿಟ್ಟುಕೊಟ್ಟವರಿಗೆ ಪರಿಹಾರ ಸಿಕ್ಕಿಲ್ಲ. ಇದಕ್ಕಾಗಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಕೂಡ ಸರಕಾರದ ಗಮನದಲ್ಲಿದೆ. ಉದ್ಘಾಟನೆ ವೇಳೆಗೆ ಈ ಸಮಸ್ಯೆಯೂ ಬಗೆಹರಿಯಬೇಕಾದ ಕಾರಣ ಸ್ವಲ್ಪ ಸಮಯ ಕಾಯೋಣ ಎಂದು ಶಾಸಕಿಯವರು ಸ್ಪಷ್ಟಪಡಿಸಿದರು.
ಉಪ್ಪಿನಂಗಡಿಯಲ್ಲಿ ನೆರೆ ಮುಂಜಾಗರೂಕತಾ ಸಭೆ ಕೇವಲ ಕಾಟಾಚಾರಕ್ಕೆ ಮಾತ್ರ ನಡೆಯುತ್ತಿದೆ ಎಂದು ನಾಮ ನಿರ್ದೇಶಿತ ಸದಸ್ಯ ಅಶ್ರಫ್ ಬಸ್ತಿಕಾರ್ ಆಪಾದಿಸಿದರು. ನೆಕ್ಕಿಲಾಡಿ ಗ್ರಾಮದ ಬೈತಡ್ಕದಲ್ಲಿ ಸಾರ್ವಜನಿಕ ಮೈದಾನವನ್ನು ಅತಿಕ್ರಮಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ್ ಆಪಾದಿಸಿದರು. ಅದು ಸರ್ಕಾರಿ ಜಾಗವಾಗಿದ್ದು, ಅದನ್ನು ಸಾರ್ವಜನಿಕ ಮೈದಾನವಾಗಿ ಮೀಸಲಿಡುವಂತೆ ಗ್ರಾಮ ಪಂಚಾಯಿತಿ ನಿರ್ಣಯ ಅಂಗೀಕರಿಸಿ ಕಳುಹಿಸಿದೆ. ಶೀಘ್ರ ಮೀಸಲಿಟ್ಟು ದಾಖಲೆ ಮಾಡಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್, ಉಪಾಧ್ಯಕ್ಷೆ ರಾಜೇಶ್ವರಿ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ, ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಜಗದೀಶ್ ಎಸ್., ತಹಶೀಲ್ದಾರ್ ಅನಂತ ಶಂಕರ್, ನಾಮ ನಿರ್ದೇಶನ ಸದಸ್ಯ ಅಶೋಕ್ ಸಂಪ್ಯ ಕೃಷ್ಣ ಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.







