ಮುಲ್ಲರ್‌ಗೆ ಶರಣಾದ ನಡಾಲ್

ಲಂಡನ್, ಜು.11: ನಾಲ್ಕು ಗಂಟೆಗೂ ಅಧಿಕ ಸಮಯ ನಡೆದ ವಿಂಬಲ್ಡನ್ ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ರಫೆಲ್ ನಡಾಲ್ ಲಕ್ಸೆಂಬರ್ಗ್‌ನ ಗಿಲ್ಲೆಸ್ ಮುಲ್ಲರ್ ವಿರುದ್ಧ 3-6, 4-6, 6-3, 6-4, 13-15 ಸೆಟ್‌ಗಳಿಂದ ಸೋತಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಸೋತಿರುವ ನಡಾಲ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಕಳೆದ ಆರು ವರ್ಷಗಳಿಂದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸುವ ಚಾಳಿ ಮುಂದುವರಿಸಿದ್ದಾರೆ.
ವಿಂಬಲ್ಡನ್‌ನಲ್ಲಿ 15 ಗ್ರಾನ್‌ಸ್ಲಾಮ್ ಚಾಂಪಿಯನ್‌ಶಿಪ್‌ನ್ನು ಆಡಿರುವ ನಡಾಲ್ 2006 ರಿಂದ 2011ರ ತನಕ ಸತತ ಐದು ಬಾರಿ ಫೈನಲ್‌ಗೆ ತಲುಪಿದ್ದರು. ಗಾಯದ ಸಮಸ್ಯೆಯಿಂದಾಗಿ 2009ರಲ್ಲಿ ಟೂರ್ನಿಯಿಂದ ಹೊರಗುಳಿದಿದ್ದರು. 2008 ಹಾಗೂ 2010ರಲ್ಲಿ ಪ್ರಶಸ್ತಿ ಜಯಿಸಲು ಯಶಸ್ವಿಯಾಗಿದ್ದರು. 2013ರಲ್ಲಿ ಮೊದಲನೆ ಸುತ್ತು, 2012, 2015ರಲ್ಲಿ ಎರಡನೆ ಸುತ್ತು, 2014 ಹಾಗೂ 2017ರಲ್ಲಿ ನಾಲ್ಕನೆ ಸುತ್ತಿನಲ್ಲಿ ಸೋತಿರುವ ನಡಾಲ್ ವಿಂಬಲ್ಡನ್ ಟೂರ್ನಿಯಿಂದ ಮತ್ತೊಮ್ಮೆ ಬೇಗನೆ ನಿರ್ಗಮಿಸಿದ್ದಾರೆ.
ಸೋಮವಾರ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 100ಕ್ಕಿಂತ ಕಡಿಮೆ ರ್ಯಾಂಕಿನ 34ರ ಹರೆಯದ ಮುಲ್ಲರ್‌ಗೆ ಶರಣಾಗಿದ್ದಾರೆ. ಅಗ್ರ-5ರಲ್ಲಿರುವ ಆಟಗಾರರ ವಿರುದ್ಧ ಸತತ 22 ಪಂದ್ಯಗಳಲ್ಲಿ ಸೋತಿರುವ ಮುಲ್ಲರ್ 2008ರ ಯುಎಸ್ ಓಪನ್ ಬಳಿಕ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮುಲ್ಲರ್ 2005ರಲ್ಲಿ ವಿಂಬಲ್ಡನ್‌ನ ಎರಡನೆ ಸುತ್ತಿನಲ್ಲಿ ನಡಾಲ್‌ರನ್ನು ಸೋಲಿಸಿದ್ದರು.





