ಕೊಲ್ಲೂರು ದೇವಳ ಪರಿಸರದಲ್ಲಿ ಮಲಯಾಳಂ ನಾಮಫಲಕ: ಕ್ರಮಕ್ಕೆ ಕರವೇ ಆಗ್ರಹ
ಉಡುಪಿ, ಜು.12: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಮಲಯಾಳಂ ನಾಮಫಲಕಗಳು ರಾರಾಜಿಸುತ್ತಿದ್ದು, ಈ ಮೂಲಕ ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅವಿಭಜಿತ ದ.ಕ. ಜಿಲ್ಲಾ ಉಸ್ತುವಾರಿ ತೇಗೂರು ಜಗದೀಶ್ ಅರಸ್ ಚಿಕ್ಕಮಗಳೂರು ಆರೋಪಿಸಿದ್ದಾರೆ.
ಉಡುಪಿಯಲ್ಲಿರುವ ಸಂಘಟನೆಯ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ರಾಜ್ಯ ಮುಜರಾಯಿ ಇಲಾಖೆಗೆ ಸೇರಿದ ಕೊಲ್ಲೂರು ದೇವಳ ಹಾಗೂ ಪರಿಸರದಲ್ಲಿ ವಿಪರೀತ ಮಲಯಾಳಂ ಭಾಷಾ ನಾಮಫಲಕಗಳು ಕಂಡುಬರುತ್ತಿವೆ. ಇಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಅವಮಾನಿಸುವಂತಹ ಹಾಗೂ ದೌರ್ಜನ್ಯ ಎಸಗುವ ಹಲವು ಪ್ರಸಂಗಗಳು ನಡೆಯುತ್ತಿರುವುದು ಶೋಚನೀಯ ಎಂದರು.
ಆದುದರಿಂದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಆಡಳಿತ ಮಂಡಳಿ, ಕನ್ನಡ ಭಾಷೆಯ ಉಳಿವಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಟೇಲ್, ವಾಣಿಜ್ಯ ಅಂಗಡಿಗಳ ಮತ್ತು ದೇವಸ್ಥಾನದ ನಾಮ ಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕ್ರಮ ಜರಗಿಸಬೇಕು. ಈ ಕುರಿತು ಜಿಲ್ಲಾಧಿಕಾರಿ, ಎಸ್ಪಿ, ದೇವಳದ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಕರವೇ ಉಡುಪಿ ತಾಲೂಕು ಮಟ್ಟದ ಸಮಾವೇಶದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆ.13ರಂದು ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 10:30ಕ್ಕೆ ಪೇಜಾವರ ಕಿರಿಯಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಲ್ಮಾಡಿ ಚರ್ಚ್‌ನ ಧರ್ಮಗುರು ರೆ.ಫಾ.ಆಲ್ಬನ್ ಡಿಸೋಜ, ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಉಪಸ್ಥಿತಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡವಹಿಸಲಿರುವರು. ಅಪರಾಹ್ನ 2:00ಗಂಟೆಯಿಂದ ಪುತ್ತೂರು ಬಾರಿಸು ಕನ್ನಡ ಡಿಂಡಿಮ ಕಲಾ ತಂಡದಿಂದ ಸಾಂಸ್ಕೃತಿಕ ನೃತ್ಯ ವೈಭವ ಜರಗಲಿದೆ ಎಂದು ತಾಲೂಕು ಅಧ್ಯಕ್ಷ ಸುಜಯ ಪೂಜಾರಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಸ್.ಆರ್.ಲೋಬೊ, ಪ್ರಧಾನ ಕಾರ್ಯದರ್ಶಿ ಸುದೇಶ್ ಶೇಟ್, ಸುಕೇಶ್ ಹೆಗ್ಡೆ, ಮಧುಸೂದನ್ ಗೌಡ, ರೇಖಾ ಪಾಲನ್, ಸುಶೀಲಾ ಮೊದಲಾದವರು ಉಪಸ್ಥಿತರಿದ್ದರು.







