‘ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ’

ಉಡುಪಿ, ಜು.12: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸಬೇಕು ಎಂದು ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಪೇಜಾವರ ಅಧೋಕ್ಷಜ ಮಠದ ವಿಜಯಧ್ವಜ ಜ್ಞಾನಪೀಠ ಹಾಗೂ ಶಾಲೆ ಹಳೆವಿದ್ಯಾರ್ಥಿಗಳ ಸಹಕಾರದಲ್ಲಿ ನಿರ್ಮಾಣಗೊಳ್ಳಲಿರುವ ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸವನ್ನು ಬುಧವಾರ ನೆರವೇರಿಸಿ ಅವರು ಆಶೀವರ್ಚನ ನೀಡಿದರು.
ವಿದ್ಯಾವಂತರಾಗಿದ್ದರೂ ಉತ್ತಮ ವ್ಯಕ್ತಿತ್ವ ಹೊಂದಿದವರ ಸಂಖ್ಯೆ ಸಮಾಜದಲ್ಲಿ ಕಡಿಮೆಯಾಗುತ್ತಿದೆ. ಭಯೋತ್ಪಾದಕರೂ ಕೂಡ ಉತ್ತಮ ಶಿಕ್ಷಣ ಪಡೆದವರೇ ಆಗಿದ್ದಾರೆ. ಹೀಗಾಗಿ ಶಿಕ್ಷಣದಲ್ಲಿ ಸಂಸ್ಕಾರ ಸೇರಿದರೆ ಮಾತ್ರ ವಿದ್ಯಾವಂತರು ಉತ್ತಮರಾಗಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಕೊರತೆಯನ್ನು ನೀಗಿಸಲು ಶಿಕ್ಷಣ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಬದಲಾವಣೆಯಾಗಬೇಕು. ಅಲ್ಲದೇ ಕಡಿಮೆ ಮಕ್ಕಳಿರುವ ಶಾಲೆ ಸುಸೂತ್ರವಾಗಿ ಮುನ್ನಡೆಯಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ. ದೇವಾಲಯ, ಚರ್ಚ್, ಮಸೀದಿಗಳು ಅಭಿವೃದ್ಧಿಯಾದಂತೆ ಸಾರ್ವಜನಿಕರು ಶಾಲೆಯ ಅಭಿವೃದ್ಧಿಗೂ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಲೆಯ ನಿವೃತ್ತ ಶಿಕ್ಷಕಿ ಮಾಲತಿ ರಾವ್ ಹಾಗೂ ಮುರಳೀಧರ ಆಚಾರ್ಯ ತಲಾ ಒಂದು ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಉಡುಪಿ ದಕ್ಷಿಣ ವಲಯ ಶಿಕ್ಷಣಾಧಿಕಾರಿ ವೆಂಕಟೇಶ್, ನಿವೃತ್ತ ಬ್ಯಾಂಕ್ ಉದ್ಯೋಗಿ ಸುಬ್ರಹ್ಮಣ್ಯ ಭಟ್, ಪ್ರಾಚಾರ್ಯ ಎ.ಪಿ.ಭಟ್ ಉಪಸ್ಥಿತರಿದ್ದರು.







