ನಾಳೆ ‘ಊನಾದಿಂದ ಜುನೈದ್‌ವರೆಗೆ’ ಪಂಜಿನ ಮೆರವಣಿಗೆ
ಉಡುಪಿ, ಜು.12: ಕರ್ನಾಟಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಂಘಟನೆಗಳ ಒಕ್ಕೂಟ(ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ) ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಗೋರಕ್ಷಣೆಯ ಹಿಂಸೆಯ ವಿರುದ್ಧ ಜನಜಾಗೃತಿಗಾಗಿ ‘ಊನಾದಿಂದ ಜುನೈದ್‌ವರೆಗೆ’ ಹೆಸರಿನಲ್ಲಿ ಪಂಜಿನ ಮೆರ ವಣಿಗೆಯನ್ನು ಜು.13ರಂದು ಸಂಜೆ 6:30ಕ್ಕೆ ಉಡುಪಿಯಲ್ಲಿ ಹಮ್ಮಿಕೊಳ್ಳ ಲಾಗಿದೆ. ಉಡುಪಿ ಸಿಂಡಿಕೇಟ್ ಬ್ಯಾಂಕಿನ ಕೆಥೋಲಿಕ್ ಸೆಂಟರ್ ಬಳಿಯಿಂದ ಹೊರಡುವ ಪಂಜಿನ ಬೆಳಕಿನ ಮೆರವಣಿಗೆಯು ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ವರೆಗೆ ಆಗಮಿಸಲಿದ್ದು, ಬಳಿಕ ಕ್ಲಾಕ್ ಟವರ್ ಎದುರು ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.
ಇತ್ತೀಚೆಗೆ ಕೇಂದ್ರ ಸರಕಾರ ಜಾನುವಾರು ಮಾರಾಟ ಮತ್ತು ಸಾಗಾಟಕ್ಕೆ ನಿರ್ಬಂಧ ಹೇರುವ ಕಾನೂನು ತರಲು ಹೊರಟ ಬಳಿಕ ಗೋಭಯೋತ್ಪಾದನೆ ಹೆಚ್ಚಿದ್ದು, ಇದರಿಂದ ಗೋಮಾಂಸ ತಿನ್ನುವವರ ಮತ್ತು ಸಾಗಿಸುವವರ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯಗಳಿಗೆ ದಲಿತರು, ಮುಸ್ಲಿಮರು ಮೊದಲ ಗುರಿಯಾಗುತ್ತಿದ್ದಾರೆ. ಮಾತ್ರವಲ್ಲ ಇತರರೂ ಬಲಿಯಾಗುತ್ತಿದ್ದಾರೆ.
ಈ ಮಧ್ಯೆ ಊನಾದಲ್ಲಿ ಜು.11ರಿಂದ 18ರವರೆಗೆ ಎರಡನೆ ಹಂತದ ಸ್ವಾತಂತ್ರ್ಯ ನಡಿಗೆ ಚಳುವಳಿ ಹಮ್ಮಿಕೊಳ್ಳಲಾಗಿದೆ. ಇನ್ನೊಂದೆಡೆ ಉತ್ತರ ಪ್ರದೇಶ ರಾಜ್ಯದಲ್ಲಿ ದಲಿತರ ಸ್ವಾಭಿಮಾನದ ಭೀಮ ಆರ್ಮಿ ಹೊಸ ಚಳುವಳಿಯನ್ನು ನಡೆಸಲುದ್ದೇಶಿಸಿದಾಗ ಅಲ್ಲಿನ ಸರಕಾರ ಅದನ್ನು ಮಟ್ಟಹಾಕಲು ಮುಂದಾಗಿದೆ. ಅಲ್ಲದೇ ಗೋ ಭಯೋತ್ಪಾದಕರು ತಮ್ಮ ಹಿಂಸೆಗೆ ಹಿಂದೂ ಧರ್ಮರಕ್ಷಣೆಯ ಪದ ಬಳಸುತ್ತಿರುವುದನ್ನು ವಿರೋಧಿಸಿ ಹಿಂದೂ ಧರ್ಮಕ್ಕೆ ಸೇರಿದ ಕೆಲವು ನಾಯಕರು ‘ರಕ್ತಪಾತಕ್ಕೆ ನನ್ನ ಹೆಸರು ಬಳಸಬೇಡಿ’ ಎಂಬ ಘೋಷಣೆಯ ಚಳುವಳಿ ನಡೆಸುತ್ತಿದ್ದಾರೆ. ಈ ಎಲ್ಲಾ ಪ್ರತಿರೋಧದ ಚಳುವಳಿಗಳ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಿಂದ ಊನಾ ಚಳವಳಿಯ ಸಮಾರೋಪದಲ್ಲಿ ಒಕ್ಕೂಟವು ಪಾಲ್ಗೊಳ್ಳಲು ನಿರ್ಧರಿಸಿದೆ ಎಂದು ಕರ್ನಾಟಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ಯಾಮರಾಜ್ ಬಿರ್ತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಉದಯ ಕುಮಾರ್ ತಲ್ಲೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







