ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಗರಂ

ಬೆಂಗಳೂರು, ಜು. 12: ವರುಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಕರೆದಿರುವ ಸಭೆಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗರಂ ಆದ ಪ್ರಸಂಗ ನಡೆದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಡೆದು ವರುಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕರೆದಿರುವ ಸಭೆಯ ಕುರಿತು ವಿವರ ನೀಡುವಂತೆ ಕೇಳಿದಾಗ, ಅದು ಒಂದು ಸುದ್ದಿನಾ, ಅದು ಸುದ್ದಿ ಆಗುತ್ತೇನ್ರೀ ಎಂದು ಖಾರವಾಗಿ ಪ್ರಶ್ನಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ಹಾಕಿರುವ ಸವಾಲು ಕುರಿತು ಗಮನ ಸೆಳೆದಾಗಲೂ ಏನನ್ನೂ ಪ್ರತಿಕ್ರಿಯಿಸದೆ ಗೃಹ ಕಚೇರಿ ಒಳ ನಡೆದರು. ಇದಕ್ಕೂ ಮುನ್ನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಅಮರೇಶ್‌ಗೌಡ ಅವರು, ಪತ್ರಿಕೆಯಲ್ಲಿ ತಮ್ಮ ಹೇಳಿಕೆ ಪ್ರಕಟವಾಗಿರುವ ವರದಿ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲು ಪ್ರಯತ್ನಿಸಿದಾಗಲೂ ಅವರ ವಿರುದ್ಧ ಹರಿಹಾಯ್ದರು. ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ನನಗೆ ತೋರಿಸಬೇಕಾ, ಅದು ದೊಡ್ಡ ಸಾಧನೆಯೇ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.







