ಚೀನಾ: ಸೇನಾ ಗಾತ್ರವನ್ನು ತಗ್ಗಿಸಲು ಐತಿಹಾಸಿಕ ಯೋಜನೆ
ಸೈನಿಕರ ಸಂಖ್ಯೆ 23 ಲಕ್ಷದಿಂದ 10 ಲಕ್ಷಕ್ಕೆ?

ಬೀಜಿಂಗ್, ಜು. 12: ವಿಶ್ವದಲ್ಲೇ ಅತ್ಯಂತ ದೊಡ್ಡ ಸೇನೆಯನ್ನು ಹೊಂದಿರುವ ಚೀನಾವು, ತನ್ನ ಸೈನಿಕರ ಸಂಖ್ಯೆಯನ್ನು 23 ಲಕ್ಷದಿಂದ 10 ಲಕ್ಷಕ್ಕೆ ಇಳಿಸಲು ಐತಿಹಾಸಿಕ ಯೋಜನೆಯೊಂದನ್ನು ಹಾಕಿಕೊಂಡಿದೆ.
ಅದೇ ವೇಳೆ, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯು ತನ್ನ ನೌಕಾ ಮತ್ತು ಕ್ಷಿಪಣಿ ಪಡೆಗಳಂಥ ಇತರ ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದು ಚೀನಾ ಸೇನೆಯ ಅಧಿಕೃತ ಪತ್ರಿಕೆ ‘ಪಿಎಲ್‌ಎ ಡೇಲಿ’ ವರದಿ ಮಾಡಿದೆ.
ಸೇನೆಯ ಈ ಸರ್ವಾಂಗ ಸುಧಾರಣೆಯ ಕುರಿತ ಲೇಖನವೊಂದು ಪತ್ರಿಕೆ ನಿರ್ವಹಿಸುವ ‘ವೀ ಚಾಟ್’ ಖಾತೆ ‘ಜುನ್ ಝೆಂಗ್‌ಪಿಂಗ್ ಸ್ಟುಡಿಯೊ’ದಲ್ಲಿ ಮಂಗಳವಾರ ಪ್ರಕಟವಾಗಿದೆ. ‘‘ಸುಧಾರಣೆಯ ವೇಳೆ ಸೇನೆಯ ಹಳೆ ವಿನ್ಯಾಸವನ್ನು ಬದಲಿಸಲಾಗುವುದು’’ ಎಂದು ಲೇಖನ ತಿಳಿಸಿದೆ.
‘‘ಚೀನಾದ ವ್ಯೆಹಾತ್ಮಕ ಗುರಿಗಳು ಮತ್ತು ಭದ್ರತಾ ಅವಶ್ಯಕತೆಗಳನ್ನು ಆಧರಿಸಿ ಸುಧಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು. ಹಿಂದೆ, ಪಿಎಲ್‌ಎಯು ಭೂಯುದ್ಧ ಮತ್ತು ತಾಯ್ನೆಲ ರಕ್ಷಣೆಗೆ ಪಿಎಲ್‌ಎ ಹೆಚ್ಚಿನ ಗಮನ ನೀಡಿತ್ತು. ಸುಧಾರಣೆಯ ವೇಳೆ, ಹಳೆ ವ್ಯವಸ್ಥೆಯು ಮೂಲಭೂತ ಬದಲಾವಣೆಗಳನ್ನು ಕಾಣಲಿದೆ’’ ಎಂದು ವರದಿ ತಿಳಿಸಿದೆ.
‘‘ಪಿಎಲ್‌ಎಯ ಸಕ್ರಿಯ ಸೇನಾ ಸಿಬ್ಬಂದಿಯ ಸಂಖ್ಯೆಯನ್ನು 10 ಲಕ್ಷಕ್ಕೂ ಕಡಿಮೆಗೆ ಇಳಿಸುವುದು ಇದೇ ಮೊದಲ ಬಾರಿಯಾಗಿದೆ’’ ಎಂದಿದೆ.
ಪಿಎಲ್‌ಎ ನೌಕಾಪಡೆ, ಪಿಎಲ್‌ಎ ವ್ಯೆಹಾತ್ಮಕ ಬೆಂಬಲ ಪಡೆ ಮತ್ತು ಪಿಎಲ್‌ಎ ರಾಕೆಟ್ ಪಡೆಯ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲಾಗುವುದು, ಆದರೆ ಪಿಎಲ್‌ಎ ವಾಯುಪಡೆಯ ಸಕ್ರಿಯ ಸೇವಾ ಸಿಬ್ಬಂದಿಯ ಸಂಖ್ಯೆ ಅಷ್ಟೇ ಇರುತ್ತದೆ ಎಂದು ಹೇಳಿದೆ.
ಚೀನಾ ರಕ್ಷಣಾ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2013ರಲ್ಲಿ ಚೀನಾವು 8.5 ಲಕ್ಷ ಹೋರಾಟ ನಡೆಸುವ ಸೈನಿಕರನ್ನು ಹೊಂದಿತ್ತು. ಆದರೆ, ಪಿಎಲ್‌ಎ ಸೇನೆಯ ಒಟ್ಟು ಸಂಖ್ಯೆಯನ್ನು ತಿಳಿಸಲಾಗಿರಲಿಲ್ಲ
ಇದಕ್ಕೂ ಮುನ್ನ, ಚೀನಾದ ಸೈನಿಕರ ಸಂಖ್ಯೆಯನ್ನು 3 ಲಕ್ಷದಷ್ಟು ಕಡಿಮೆ ಮಾಡಲಾಗುವುದು ಎಂದು ಆ ದೇಶದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘೋಷಿಸಿದ್ದರು.
‘‘3 ಲಕ್ಷ ಸೈನಿಕರ ಕಡಿತವನ್ನು 2015ರಲ್ಲಿ ಘೋಷಿಸುವ ಮೊದಲು ದೇಶದಲ್ಲಿ 23 ಲಕ್ಷ ಸೈನಿಕರಿದ್ದರು’’ ಎಂದು ಚೀನಾದ ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.







