ನಟ ಯಶ್ ಹೆಸರಿನಲ್ಲಿ ಹಣ ಪಡೆದು ವಂಚನೆ: ನಿರ್ದೇಶಕ ಪ್ರಖ್ಯಾತ್‌ಗೌಡ ಆರೋಪ
ಬೆಂಗಳೂರು, ಜು.12: ಪದ್ಮಲತಾ, ವಿಕಾಸ್, ಜಗದೀಶ್, ಪುರುಷೋತ್ತಮ್ ಹಾಗೂ ಸಂಗಡಿಗರು ಚಿತ್ರನಟ ಯಶ್ ಅವರ ಹೆಸರಿನಲ್ಲಿ 40 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ನಿರ್ದೇಶಕ ಪ್ರಖ್ಯಾತ್‌ಗೌಡ ಆರೋಪಿಸಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರನಟ ಯಶ್‌ರ ಸಂಬಂಧಿಕರು ಎಂದು ಹೇಳಿ ಅವರ ಚಿತ್ರ ನಿರ್ದೇಶಿಸುವ ಅವಕಾಶ ಕೊಡಿಸುವುದಾಗಿ 2 ಲಕ್ಷ ಹಣ ಪಡೆದಿದ್ದರು. 2014ರಲ್ಲಿ ಬಿಡುಗಡೆಯಾದ ಲಿಂಗ ಚಿತ್ರದ ಡಿಸ್ಟ್ರಿಬ್ಯೂಶನ್ ಮಾಡಿಸುವ ಸಲುವಾಗಿ 40 ಲಕ್ಷ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಹೇಳಿದರು.
ಹಣದ ಭದ್ರತೆ ದೃಷ್ಟಿಯಿಂದ ನೀಡಿದ್ದ ಚೆಕ್ಕನ್ನು ನಗದೀಕರಿಸಲು ಬ್ಯಾಂಕಿಗೆ ಹೋದ ಸಂದರ್ಭದಲ್ಲಿ ಚೆಕ್ ಬೌನ್ಸ್ ಆಗಿದ್ದು ನನ್ನ ಗಮನಕ್ಕೆ ಬಂದಿದೆ. ಈ ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ನ್ಯಾಯಾಲಯದಿಂದ ಇದಕ್ಕೆ ಸಂಬಂಧಿಸಿದಂತೆ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಆದರೆ, ಈಗ ಬಂಧನ ಭೀತಿಯಿಂದ ಇವರು ಕೇಸು ವಾಪಸ್ ಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಪದ್ಮಲತಾ, ಜಗದೀಶ್ ಮತ್ತು ಸಂಗಡಿಗರು ರೌಡಿಗಳ ಹೆಸರಿನಲ್ಲಿ ಬೆದರಿಕೆ ಕರೆ ಮಾಡಿಸಿ 25 ಲಕ್ಷ ಹಫ್ತಾ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನಾನಿದನ್ನು ನಿರಾಕರಿಸಿದಾಗ ಚೆಕ್‌ಬೌನ್ಸ್ ಕೇಸ್ ವಾಪಸ್ ಪಡೆಯುವಂತೆ ಹೇಳಿದರು. ಕೇಸ್ ವಾಪಸ್ ಪಡೆಯಲಿಲ್ಲ ಎಂದಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಅಲ್ಲದೆ, ಮೇ.3 ರಂದು ಚಂದ್ರಾಲೇಔಟ್ ಪೊಲೀಸ್ ಠಾಣೆಯ ಹಿಂಭಾಗ ಹಾಗೂ ಬಿಎಸ್‌ಎನ್‌ಎಲ್ ಕಚೇರಿ ಬಳಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ದೈಹಿಕ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಅವರು ಹೇಳಿದರು.
ಇಷ್ಟೆ ಅಲ್ಲದೆ, ಹಲವಾರು ಬಾರಿ ನನ್ನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಜೊತೆಗೆ, ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಳ್ಳು ದೂರನ್ನು ನೆಪವಾಗಿಟ್ಟುಕೊಂಡು ಹಲವು ಟಿವಿ ಮಾಧ್ಯಮಗಳು ಹಾಗೂ ಪತ್ರಿಕೆಗಳು ಕಾಮುಕ, ರೇಪಿಸ್ಟ್, ವೇಶ್ಯಾವಾಟಿಕೆ ದಂಧೆಯ ಬ್ರೋಕರ್ ಎಂದೆಲ್ಲಾ ತಪ್ಪು ಸುದ್ದಿ ಪ್ರಸಾರ ಮಾಡಿ ನನ್ನ ಚಾರಿತ್ರ ವಧೆ ಮಾಡಿದ್ದಾರೆ. ಇದರಿಂದಾಗಿ 8 ಕೋಟಿ ರೂ.ಗಳ ಬಜೆಟ್‌ನಲ್ಲಿ ನಡೆಯುತ್ತಿದ್ದ ‘ಕತ್ರಿಗುಪ್ಪೆ ಕಟಿಂಗ್ ಶಾಪ್’ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳು ಬಿಂಬಿಸಿದ ಸುದ್ದಿಯಿಂದ ಮನೆ ಮಾಲಕರು ಮನೆ ಖಾಲಿ ಮಾಡಿಸಿದ್ದಾರೆ. ನಿಗದಿಯಾಗಿದ್ದ ನನ್ನ ಮದುವೆ ಮುರಿದು ಬಿದ್ದಿದೆ. ಎಲ್ಲವನ್ನೂ ಕಳೆದುಕೊಂಡು ಅಸಹಾಯಕನಾಗಿ ಬೀದಿಗೆ ಬಂದಿದ್ದೇನೆ. ಹೀಗಾಗಿ, ನಾನು ಈ ಸಿತ್ಥಿಗೆ ಬರಲು ಕಾರಣವಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನನಗೆ ನ್ಯಾಯ ದೊರಕಿಸಿಕೊಡಬೇಕು. ನನಗೂ ಮತ್ತು ನಮ್ಮ ಕುಟುಂಬದವರಿಗೆ ಇವರಿಂದ ಪ್ರಾಣ ಬೆದರಿಕೆಯಿದ್ದು, ಮುಂದಿನ ದಿನಗಳಲ್ಲಿ ನಮ್ಮ ಜೀವಕ್ಕೆ ಹಾನಿಯುಂಟಾದರೆ ಇವರೇ ಕಾರಣಕರ್ತರಾಗಿರುತ್ತಾರೆ ಎಂದು ಅವರು ಹೇಳಿದರು.







