ಮನೆಗೆ ನುಗ್ಗಿ ಯುವತಿಗೆ ಚಾಕು ಇರಿತ
ಬೆಂಗಳೂರು, ಜು.12: ಮನೆಗೆ ನುಗ್ಗಿ ಯುವತಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಒಡಿಶಾ ಮೂಲದ 20 ವರ್ಷದ ಯುವತಿ ಪೀಣ್ಯದಲ್ಲಿ ವಾಸವಾಗಿದ್ದು, ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದಾರೆ. ಅಸ್ಸಾಂ ಮೂಲದ ಕೃಷ್ಣ(22) ಎಂಬಾತ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಎರಡು ತಿಂಗಳಿನಿಂದ ಯುವತಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ.
ಆಕೆಯ ಮನೆಯನ್ನೂ ನೋಡಿಕೊಂಡಿದ್ದು, ಒಬ್ಬರೇ ವಾಸವಿರಬಹುದೆಂದು ಭಾವಿಸಿ ರಾತ್ರಿ ಈಕೆಯ ಮನೆ ಬಳಿ ಬಂದು ಬಾಗಿಲು ತಟ್ಟಿದ್ದಾನೆ. ಯುವತಿ ಬಾಗಿಲು ತೆಗೆದಿಲ್ಲ. ಪುನಃ ಯುವಕ ಬಾಗಿಲನ್ನು ಜೋರಾಗಿ ತಳ್ಳಿದಾಗ ಬಾಗಿಲು ತೆರೆದುಕೊಂಡಿದೆ. ಈ ವೇಳೆ ಯುವತಿ ಹಾಗೂ ಮತ್ತೊಬ್ಬ ಮಹಿಳೆ ಇರುವುದನ್ನು ಗಮನಿಸಿದ್ದಾನೆ. ಮನೆಯಲ್ಲಿದ್ದ ಇಬ್ಬರು ಸಹಾಯಕ್ಕಾಗಿ ಕಿರುಚಿಕೊಂಡಾಗ ಈತ ಚಾಕುವಿನಿಂದ ಯುವತಿಗೆ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕಿರುಚಾಟದಿಂದ ಎಚ್ಚರಗೊಂಡ ನೆರೆಹೊರೆಯವರು ವಿಷಯ ತಿಳಿದು ಗಸ್ತಿನಲ್ಲಿದ್ದ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಪರಾರಿಯಾಗಿರುವ ಯುವಕನಿಗಾಗಿ ಪೀಣ್ಯ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.





