ಏಳನೆ ವೇತನ ಆಯೋಗ ಶಿಫಾರಸ್ಸು ಜಾರಿಗೆ ಆಗ್ರಹ: ಜು.24 ರಂದು ದಿಲ್ಲಿಯಲ್ಲಿ ಪ್ರತಿಭಟನೆ
ಬೆಂಗಳೂರು, ಜು.12: ಏಳನೆ ವೇತನ ಆಯೋಗದ ಶಿಫಾರಸ್ಸಿನಂತೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ಕೂಡಲೇ ನೀಡಬೇಕು ಎಂದು ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎಚ್.ಪ್ರಕಾಶ್, 2016 ಜನವರಿಯಿಂದಲೇ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜು ಅಧ್ಯಾಪಕರುಗಳಿಗೆ ಏಳನೆ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಸೌಲಭ್ಯಗಳನ್ನು ನೀಡಬೇಕಿತ್ತು. ಆದರೆ, ಇದುವರೆಗೂ ಈ ಶಿಫಾರಸ್ಸುಗಳನ್ನು ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ: ಕೇಂದ್ರ ಸರಕಾರ ಕೂಡಲೇ 7 ನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಸರಕಾರದ ಗಮನ ಸೆಳೆಯಲು ಜು.24 ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಅಧ್ಯಾಪಕರಿಂದ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬೇಡಿಕೆಗಳು: 2016 ರಿಂದ ರಾಜ್ಯದ ಅಧ್ಯಾಪಕರಿಗೆ ಯುಜಿಸಿ ವೇತನ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ 4-5 ವರ್ಷಗಳಿಂದ ಖಾಲಿಯಿರುವ ಪ್ರಾಂಶುಪಾಲ, ಜಂಟಿ ನಿರ್ದೇಶಕ ಹಾಗೂ ಹೆಚ್ಚುವರಿ ನಿರ್ದೇಶಕ ಮತ್ತು ನಿರ್ದೇಶಕ ಹುದ್ದೆಗಳನ್ನು ಜೇಷ್ಠತಾ ಆಧಾರದ ಮೇಲೆ ಹಾಗೂ ಆದ್ಯತೆಯ ಮೇಲೆ ಭರ್ತಿ ಮಾಡಬೇಕು. ಖಾಲಿಯಿರುವ ಅಧ್ಯಾಪಕ ಹುದ್ದೆಗಳಿಗೆ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರನ್ನು ಅರ್ಹತೆ ಆಧಾರದ ಮೇಲೆ ಖಾಯಂ ಮಾಡಬೇಕು.
ಉದ್ದೇಶಿತ ಯುಜಿಸಿ ಕಾಯ್ದೆಯನ್ನು ರದ್ದುಪಡಿಸಬೇಕು ಮತ್ತು ಕುಲಪತಿಗಳ ನೇಮಕಾತಿ, ಅಭಿವೃದ್ಧಿ ಕಾರ್ಯಗಳು ಹಾಗೂ ಶೈಕ್ಷಣಿಕ ತೀರ್ಮಾನ ಕೈಗೊಳ್ಳುವ ಸ್ವಾಯತ್ತ ಅಧಿಕಾರವನ್ನು ಮುಂದುವರಿಸಬೇಕು. ವಿಶ್ವವಿದ್ಯಾಲಯಗಳ ಕುಲಸಚಿವ(ಆಡಳಿತ ಹಾಗೂ ವೌಲ್ಯಮಾಪನ) ಮತ್ತು ಎಲ್ಲ ಶೈಕ್ಷಣಿಕ ಅಧಿಕಾರದ ಹುದ್ದೆಗಳನ್ನು ಅಧ್ಯಾಪಕರಿಗೆ ಮೀಸಲಿಡಬೇಕು. ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡದೆ, ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.







