ಇಕಾನಮಿ ಕ್ಲಾಸ್‌ನಲ್ಲಿ ಮಾಂಸಾಹಾರ ಪೂರೈಕೆ ಸ್ಥಗಿತ: ಏರ್ ಇಂಡಿಯಾ ನಿರ್ಧಾರಕ್ಕೆ ಸಂ.ಸಮಿತಿ ಕಳವಳ

ಹೊಸದಿಲ್ಲಿ,ಜು.12: ತನ್ನ ದೇಶಿಯ ವಿಮಾನ ಯಾನಗಳಲ್ಲಿ ಇಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಮಾಂಸಾಹಾರ ಪೂರೈಕೆಯನ್ನು ಸ್ಥಗಿತಗೊಳಿಸುವ ಏರ್ ಇಂಡಿಯಾದ ನಿರ್ಧಾರದ ಬಗ್ಗೆ ವಾಯುಯಾನ ಇಲಾಖೆಗೆ ಸಂಬಂಧಿತ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಅದು ಈ ಕ್ರಮದ ಬಗ್ಗೆ ಏರ್ ಇಂಡಿಯಾದಿಂದ ವಿವರಣೆ ಕೇಳಲಿದೆ.
ಬುಧವಾರ ನಡೆದ ಸಮಿತಿಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯಿತು.
ಈ ವಿಷಯವನ್ನು ತಿಳಿಸಿದ ಸಮಿತಿಯ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು, ಯಾವ ಆಧಾರದಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವಿವರಣೆಯನ್ನು ನೀಡುವಂತೆ ಸಮಿತಿಯು ಏರ್ ಇಂಡಿಯಾವನ್ನು ಕೇಳಲಿದೆ ಎಂದರು. ವೇಣುಗೋಪಾಲ್ ಹಿಂದಿನ ಯುಪಿಎ ಸರಕಾರದಲ್ಲಿ ಸಹಾಯಕ ವಾಯುಯಾನ ಸಚಿವರಾಗಿದ್ದರು.
ನಷ್ಟದಲ್ಲಿರುವ ಏರ್ ಇಂಡಿಯಾ ಮಿತವ್ಯಯದ ಕ್ರಮವಾಗಿ ತನ್ನ ದೇಶಿಯ ವಿಮಾನಯಾನಗಳಲ್ಲಿ ಇಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಮಾಂಸಾಹಾರ ಪೂರೈಕೆಯನ್ನು ನಿಲ್ಲಿಸಿದೆ.
ಏರ್ ಇಂಡಿಯಾದಲ್ಲಿ ಹೂಡಿಕೆ ಹಿಂದೆಗೆತ ವಿಷಯವನ್ನು ಸಮಿತಿಯು ಬುಧವಾರ ಚರ್ಚಿಸಲಿತ್ತಾದರೂ ಸಂಬಂಧಿಸಿದ ಸರಕಾರಿ ಅಧಿಕಾರಿಗಳು ಗೈರುಹಾಜರಾಗಿದ್ದರಿಂದ ಅದನ್ನು ಕೈಬಿಟ್ಟಿತು.
ಹೂಡಿಕೆ ಹಿಂದೆಗೆತ ನಿರ್ಧಾರಕ್ಕೆ ವಿವರಣೆಯನ್ನು ನೀಡುವಂತೆ ಸಮಿತಿಯು ನಾಗರಿಕ ವಾಯುಯಾನ, ವಿತ್ತ ಸಚಿವಾಲಯ ಮತ್ತು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳಿಗೆ ಸೂಚಿಸಿತ್ತು.
ಈ ಬಗ್ಗೆ ಜುಲೈ 19ರಂದು ಮತ್ತೆ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಸಮಿತಿಯ ಸದಸ್ಯರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.







