ಕಾಶ್ಮೀರ ವಿವಾದದಲ್ಲಿ ರಚನಾತ್ಮಕ ಪಾತ್ರ ವಹಿಸಲು ಸಿದ್ಧ: ಚೀನಾ

ಬೀಜಿಂಗ್, ಜು.12: ಕಾಶ್ಮೀರದಲ್ಲಿರುವ ಪ್ರಸಕ್ತ ಪರಿಸ್ಥಿತಿ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದು ಭಾರತ ಮತ್ತು ಪಾಕ್ ನಡುವಿನ ಸಂಬಂಧವನ್ನು ಸುಧಾರಿಸಲು ರಚನಾತ್ಮಕ ಪಾತ್ರ ವಹಿಸಲು ತಾನು ಸಿದ್ಧ ಎಂದು ಚೀನಾ ತಿಳಿಸಿದೆ.
ಭಾರತ-ಪಾಕಿಸ್ತಾನಗಳು ದಕ್ಷಿಣ ಏಶ್ಯಾದ ಪ್ರಮುಖ ರಾಷ್ಟ್ರಗಳಾಗಿವೆ. ಆದರೆ ಕಾಶ್ಮೀರದ ಪರಿಸ್ಥಿತಿ ಅಂತರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಜೆಂಗ್ ಶುವಂಗ್ ಹೇಳಿದ್ದಾರೆ. ಭಾರತ-ಪಾಕ್ ನಡುವಿನ ಉದ್ವೇಗದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕಾಶ್ಮೀರದ ಗಡಿನಿಯಂತ್ರಣಾ ರೇಖೆಯ ಬಳಿ ತಿಕ್ಕಾಟ ಉಂಟಾಗಿದೆ. ಇದರಿಂದ ಉಭಯ ರಾಷ್ಟ್ರಗಳ ಶಾಂತಿ ಮತ್ತು ಸ್ಥಿರತೆಗೆ ದಕ್ಕೆ ಒದಗಿರುವುದರ ಜೊತೆಗೆ ಇಡೀ ಪ್ರದೇಶದ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗಿದೆ .
ಉಭಯ ರಾಷ್ಟ್ರಗಳು ಉದ್ವಿಗ್ನತೆ ಹೆಚ್ಚುವ ಯಾವುದೇ ಕಾರ್ಯಕ್ಕೆ ಮುಂದಾಗದೆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಅನುಕೂಲವಾಗುವ ಕಾರ್ಯಕ್ಕೆ ಮುಂದಾಗಬೇಕು. ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ರಚನಾತ್ಮಕ ಪಾತ್ರ ವಹಿಸಲು ಚೀನಾ ಸಿದ್ಧವಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದರು.
ಪಾಕಿಸ್ತಾನದ ಕೋರಿಕೆಯಂತೆ ಮೂರನೇ ರಾಷ್ಟ್ರದ ಸೇನೆ ಕಾಶ್ಮೀರವನ್ನು ಪ್ರವೇಶಿಸಬಹುದು ಎಂದು ಚೀನಾದ ಸರಕಾರಿ ನಿಯಂತ್ರಣದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ನಲ್ಲಿ ಎರಡು ದಿನಗಳ ಹಿಂದೆ ಪ್ರಕಟವಾಗಿದ್ದ ಲೇಖನವೊಂದರಲ್ಲಿ ತಿಳಿಸಲಾಗಿದೆ. ಕಾಶ್ಮೀರವು ದ್ವಿಪಕ್ಷೀಯ ವಿಷಯವಾಗಿದ್ದು ಇದರಲ್ಲಿ ಮೂರನೇ ಪಕ್ಷದ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂದು ಭಾರತ ಹೇಳುತ್ತಿದೆ.







