ಹತಾಶೆಯಿಂದ ಅಸಂಸ್ಕೃತ ಪದ ಬಳಕೆ: ದಿನೇಶ್ ಗುಂಡೂರಾವ್
ಬಿಜೆಪಿ ಪ್ರತಿಭಟನೆ ಖಂಡನೀಯ, ಶೋಭಾ ಬೇಕಾದರೆ ಮದುವೆಯಾಗಲಿ

ಬೆಂಗಳೂರು, ಜು. 12: ಸಂಸದೆ ಶೋಭಾ ಕರಂದ್ಲಾಜೆ ಅವರು ತನ್ನ ನಾಲಗೆಗೆ ಲಗಾಮಿಲ್ಲದೆ ಮಾತನಾಡುತ್ತಿದ್ದು, ಬಿಜೆಪಿ ಮುಗಿಸೋ ಷಡ್ಯಂತ್ರವನ್ನು ಅವರೇ ರೂಪಿಸಿದಂತೆ ಕಾಣುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೆಸೆಸ್ಸ್ ಕಾರ್ಯಕರ್ತನ ಹತ್ಯೆ ವಿರೋಧಿಸಿ ಬಿಜೆಪಿ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದ್ದು ಖಂಡನೀಯ ಎಂದು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಕೆಜೆಪಿಯಲ್ಲಿದ್ದಾಗ ಒಂದು ಬಾರಿ ಬಿಜೆಪಿಯನ್ನ ಮುಗಿಸಿದ್ದರು. ಇದೀಗ ಮತ್ತೆ ಬಿಜೆಪಿಯನ್ನ ಮುಗಿಸೋಕೆ ಅವರೇ ಮುಂದಾಗ್ತಿದ್ದಾರೆ. ಸಮಾಜದ ಸ್ವಾಸ್ಥವನ್ನ ಹಾಳು ಮಾಡುತ್ತಿದ್ದಾರೆ ಎಂದು ದೂರಿದ ಅವರು, ರಾಜ್ಯ ಸರಕಾರದ ವಿರುದ್ಧ ಮತೀಯವಾದವನ್ನು ಮುಂದಿಟ್ಟುಕೊಂಡು ದ್ವೇಷ ಹೆಚ್ಚಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯೋಜನೆ ರೂಪಿಸಿದ್ದಾರೆಂದು ಕಿಡಿಕಾರಿದರು.
ರಾಜ್ಯ ಸರಕಾರದ ಸಾಧನೆಗೆ ಮಸಿ ಬಳಿದು, ಅದರ ಲಾಭ ಪಡೆಯಲು ಹುನ್ನಾರ ಮಾಡ್ತಿದ್ದಾರೆ. ರಕ್ಷಣೆ ಪಡೆಯುವಷ್ಟು ಅಬಲರಲ್ಲ ಹಿಂದುಗಳು. ಅವರು ಸಮರ್ಥರು ಎಂದ ದಿನೇಶ್, ಕೋಮುಗಲಭೆ, ಭಾವನಾತ್ಮಕ ವಿಚಾರವಿಟ್ಟುಕೊಂಡು ರಾಜಕಾರಣ ಮಾಡಿ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದರು. ರಾಜಕಾರಣದ ವ್ಯವಸ್ಥೆಯಲ್ಲಿ ಬಿಜೆಪಿಯವರು ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ. ಮುಂದೆ ರಾಜ್ಯದಲ್ಲಿ ಅಧಿಕಾರ ಬರುವುದು ಅವರಿಗೆ ಅನುಮಾನ. ಹೀಗಾಗಿ ಹತಾಶರಾಗಿ ಅಸಂಸ್ಕೃತ ಪದಗಳನ್ನು ಬಳಸ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ತಪ್ಪೇನು: ನನ್ನ ಮದುವೆಯಾಗಿದ್ದು 1994ರಲ್ಲಿ. ತಾನು ಮದುವೆಯಾಗಿ ತುಂಬಾ ವರ್ಷಗಳೇ ಕಳೆದಿದೆ. ಈ ಬಗ್ಗೆ ಶೋಭಾ ಕರಂದ್ಲಾಜೆ, ಈಗ ಏಕೆ ಮಾತನ್ನಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಬಹುಶಃ ಅವರಿಗೆ ಇನ್ನು ಮದುವೆಯಾಗಿಲ್ಲ. ಅವರಿಗೆ ಇನ್ನು ಮದುವೆಯಾಗುವ ಅವಕಾಶವಿದೆ. ಅವರು ಬೇಕಾದ್ರೆ ಮದುವೆಯಾಗಲೀ ಎಂದು ಲೇವಡಿ ಮಾಡಿದರು.
ನಾನು ಯಾರನ್ನು ಮದುವೆಯಾಗಿದ್ದೇನೆ ಎಂದು ಎಲ್ಲರಿಗೂ ಗೊತ್ತು. ಅದರಿಂದ ಸಮಾಜಕ್ಕೆ ಯಾವುದೇ ತಪ್ಪು ಸಂದೇಶ ಹೋಗಿಲ್ಲ. ನಾನು ಅಂದು ದಲಿತ ಹುಡುಗಿಯನ್ನು ಇಷ್ಟಪಟ್ಟಿದ್ರೆ ಅವರನ್ನೇ ಮದುವೆಯಾಗುತ್ತಿದ್ದೆ. ನನಗೆ ಯಾವುದೇ ಕಟ್ಟುಪಾಡುಗಳಿರಲಿಲ್ಲ. ನಾನು ಎಲ್ಲರನ್ನು ಒಪ್ಪಿಸಿ ಮದುವೆಯಾಗಿದ್ದೇನೆ. ಅವರಿಗೆ ಇನ್ನೂ ಅವಕಾಶವಿದೆ. ನೋಡಿ ಬೇಕಾದ್ರೆ ಮದುವೆ ಮಾಡ್ಕೊಳ್ಳಿ ಎಂದು ಹೇಳಿದರು.
ಭಂಗ ತಂದ್ರೆ ನಿಷೇಧ: ಕಾನೂನು ಸುವ್ಯವಸ್ಥೆ, ಸಾಮಾಜಿಕ ಶಾಂತಿಗೆ ಭಂಗವನ್ನು ಉಂಟು ಮಾಡುವ ಯಾವುದೇ ಸಂಘಟನೆಗಳಿದ್ದರೂ, ಅವುಗಳನ್ನು ನಿಷೇಧಿಸಬೇಕು. ಬಜರಂಗ ದಳ, ಆರೆಸೆಸ್ಸ್, ಎಸ್‌ಡಿಪಿಐ ಸೇರಿದಂತೆ ಅದು ಯಾವುದೇ ಆಗಿರಲಿ ಎಂಬುದು ನನ್ನ ಅಭಿಪ್ರಾಯ ಎಂದು ಸ್ಪಷ್ಟಣೆ ನೀಡಿದರು







