ಇಸ್ರೊದ ಸಾಧನೆ: ಹಡಗಿನಲ್ಲಿ ನೆಲೆಗೊಳಿಸುವ ಆ್ಯಂಟೆನ ಟರ್ಮಿನಲ್ ಅಭಿವೃದ್ಧಿ

ಬೆಂಗಳೂರು, ಜು.12: ಅಂತರಿಕ್ಷ ಸಂಸ್ಥೆ ಇಸ್ರೋದ 'ದೂರಮಿತಿ, ಪತ್ತೆಹಚ್ಚುವಿಕೆ ಮತ್ತು ಆದೇಶ ಜಾಲಬಂಧ(ಐಎಸ್‌ಟಿಆರ್‌ಎಸಿ)ವು ಉಡ್ಡಯನ ವಾಹನದ ದೂರಮಿತಿ ಪತ್ತೆಹಚ್ಚುವ ಮತ್ತು ಆದೇಶ ಪ್ರಕ್ರಿಯೆಯ ಅವಶ್ಯಕತೆಗಳನ್ನು ಪೂರೈಸಬಲ್ಲ, ಹಡಗಿನ ಮೇಲೆ ನೆಲೆಗೊಳಿಸುವ ಆ್ಯಂಟೆನ ಟರ್ಮಿನಲ್ ರೂಪಿಸಿ ಅದನ್ನು ಅಭಿವೃದ್ಧಿಗೊಳಿಸಿದೆ.
4.6 ಮೀಟರ್ ಉದ್ದದ, ಅತ್ತಿಂದಿತ್ತ ಸಾಗಿಸಬಹುದಾದ ಈ ಆ್ಯಂಟೆನಾ ವ್ಯವಸ್ಥೆಯನ್ನು ಸ್ಥಳೀಯವಾಗಿ ನಿರ್ಮಿಸಲಾಗಿದ್ದು ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಸಮರ್ಥವಾಗಿದೆ. ವೆಚ್ಚವನ್ನು ಗಮನಾರ್ಹವಾಗಿ ಕಡಿಮೆಗೊಳಿಸುವ ಜೊತೆಗೆ ಕಾರ್ಯನಿರ್ವಹಣೆಯ ವಿಶ್ವಸನೀಯತೆಯನ್ನು ಸುಧಾರಿಸಿದೆ ಎಂದು ಅಂತರಿಕ್ಷ ಸಂಸ್ಥೆ ತಿಳಿಸಿದೆ.
ಬಹುದೂರದ ಅಂತರಿಕ್ಷ ಯೋಜನೆಯ ಸಂದರ್ಭದಲ್ಲಿ ಉಡ್ಡಯನ ಮತ್ತು ಆ ಬಳಿಕದ ಆರಂಭಿಕ ಹಂತದ ಸಂದರ್ಭ ಟಿಟಿಸಿ (ದೂರಮಿತಿ, ಪತ್ತೆಹಚ್ಚುವಿಕೆ ಮತ್ತು ಆದೇಶ) ನೆರವು ಒದಗಿಸಲು ಭೂಮಿಯ ಮೇಲೆ ನಿರ್ಮಿಸಲಾಗಿರುವ ಹಲವು ಕೇಂದ್ರಗಳ ಅಗತ್ಯವಿದೆ. ಉಡ್ಡಯನ ವಾಹನದ ಪ್ರಕ್ಷೇಪ ಪಥ ಮತ್ತು ದೃಗ್ಗೋಚರತೆಯ ಅವಶ್ಯಕತೆಗೆ ಹೊಂದಿಕೊಂಡು ಕೆಲವೊಮ್ಮೆ ಭೂಮಿಯ ಮೇಲೆ ನಿರ್ಮಿಸಲಾಗಿರುವ ಆ್ಯಂಟೆನ ಕೇಂದ್ರಗಳು ಸೂಕ್ತವಾಗಿರುವುದಿಲ್ಲ. ಇಂತಹ ಸಂದರ್ಭ ಸಮುದ್ರದ ಮಧ್ಯೆ ಇರುವ ಟಿಟಿಸಿ ಕೇಂದ್ರಗಳು ಹೆಚ್ಚು ಅನುಕೂಲವಾಗುತ್ತವೆ.
ಈ ಆ್ಯಂಟೆನ ಕೇಂದ್ರದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಬಂಗಾಲ ಕೊಲ್ಲಿಯಲ್ಲಿರುವ ನಿರ್ಧಿಷ್ಟ ವೀಕ್ಷಣಾ ಸ್ಥಳದಲ್ಲಿ ನೆಲೆಗೊಳಿಸಲಾದ 'ಸಾಗರ್ ಮಂಜೂಷ' ಎಂಬ ಹಡಗಿನಲ್ಲಿ ಇರಿಸಲಾದ ಆ್ಯಂಟೆನ ಕೇಂದ್ರ ಪಿಎಸ್‌ಎಲ್‌ವಿ-ಸಿ38 ಉಪಗ್ರಹವನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಪಿಎಸ್‌ಎಲ್‌ವಿ-ಸಿ38 ಉಪಗ್ರಹವನ್ನು ಜೂನ್ 23ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಅಂತರಿಕ್ಷಕ್ಕೆ ಉಡಾಯಿಸಲಾಗಿತ್ತು.







