ಭತ್ತದ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ
ಉಡುಪಿ, ಜು.12: ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ಇಲಾಖೆ ವತಿಯಿಂದ ವಿವಿಧ ಹಂತಗಳಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಪರ್ಧೆ ನಡೆಸಿ ಪ್ರತಿ ಹಂತದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುತ್ತದೆ.
ಮುಂಗಾರು ಹಂಗಾಮಿಗೆ ಉಡುಪಿ ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ರೈತರು ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಿ ಸಕ್ಷಮ ಅರ್ಜಿ ಭೂಮಾಲಿಕತ್ವ ಕ್ಷೇತ್ರ ಕುರಿತ ಕಂದಾಯ ಇಲಾಖೆಯ ದಾಖಲಾತಿ ಅಥವಾ ಗುತ್ತಿಗೆ ಕರಾರು ಪತ್ರದೊಂದಿಗೆ ಆ.31ರೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ನಿಗದಿಪಡಿಸಲಾದ ಬಹುಮಾನದ ಮೊತ್ತಗಳ ವಿವರ ಹೀಗಿದೆ. ತಾಲೂಕು ಮಟ್ಟದ ಬೆಳೆ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 15,000ರೂ, ದ್ವಿತೀಯ ಬಹುಮಾನ 10,000ರೂ., ತೃತೀಯ ಬಹುಮಾನ 5,000ರೂ., ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ 25,000ರೂ., ದ್ವಿತೀಯ ಬಹುಮಾನ 15,000ರೂ., ತೃತೀಯ ಬಹುಮಾನ 10,000ರೂ., ರಾಜ್ಯ ಮಟ್ಟದ ಬೆಳೆ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 25,000ರೂ., ಹಾಗೂ ತೃತೀಯ ಬಹುಮಾನ 15,000ರೂ.
ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಸಾಮಾನ್ಯ ವರ್ಗದ ರೈತರು ಕ್ರಮವಾಗಿ 100ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಕ್ರಮವಾಗಿ 25 ರೂ. ಪ್ರವೇಶ ಶುಲ್ಕವನ್ನು ಪಾವತಿಸಿ ಬೆಳೆ ಸ್ಪರ್ಧೆಗೆ ಹೆಸರು ನೊಂದಾಯಿಸಬಹುದಾಗಿದೆ.
ಕಳೆದ ಮೂರು ವರ್ಷದ ಅವಧಿಯಲ್ಲಿ ಕೆಳಹಂತದ ನಿಗದಿತ ಸ್ಪರ್ಧೆಯಲ್ಲಿ ಬಹುಮಾನ ಪಡೆದ ರೈತರು ಅದೇ ಮಟ್ಟದಲ್ಲಿ ಪುನ: ಭಾಗವಹಿಸುವಂತಿಲ್ಲ. ಆ ಬೆಳೆಯಲ್ಲಿ ಮೇಲಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಹೆಸರು ನೊಂದಾಯಿಸಿದ ರೈತರು ಕನಿಷ್ಠ ಹೆಕ್ಟೇರಿಗೆ 50 ಕ್ವಿಂಟಾಲ್ ಇಳುವರಿ ಪಡೆದಲ್ಲಿ ಮಾತ್ರ ಬೆಳೆ ಸ್ಪರ್ಧೆಯಡಿ ಬಹುಮಾನಕ್ಕೆ ಪರಿಗಣಿಸಲಾಗುವುದು.







