ಶರತ್ ಮಡಿವಾಳರ ಕುಟುಂಬಕ್ಕೆ ಪರಿಹಾರ: ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕಾ ಉಳಿಪಾಡಿಗುತ್ತು
ಬಂಟ್ವಾಳ, ಜು. 12: ಶರತ್ ಮಡಿವಾಳರ ಕುಟುಂಬಕ್ಕೆ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕಾ ಉಳಿಪಾಡಿಗುತ್ತು ತಿಳಿಸಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರತ್ ಮನೆಯ ಆಧಾರಸ್ಥಂಭವಾಗಿದ್ದ. ಅವರ ತಂದೆಗೂ ವಯಸ್ಸಾದ ಹಿನ್ನೆಲೆಯಲ್ಲಿ ಅಂಗಡಿಯನ್ನು ಕೂಡ ಶರತ್ ನೋಡಿಕೊಳ್ಳುತ್ತಿದ್ದ. ಅವನ ಸಾವಿನಿಂದ ಮನೆಮಂದಿಗೆ ತುಂಬಲಾರದ ನಷ್ಟವಾಗಿದ್ದು, ಸರಕಾರವು ಗರಿಷ್ಠ ಮಟ್ಟದ ಪರಿಹಾರವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು. ಘಟನೆ ನಡೆದು 9 ದಿನಗಳಾದರೂ ಶರತ್ ಹತ್ಯೆಯ ಆರೋಪಿಗಳನ್ನು ಪೊಲೀಸ್ ಇಲಾಖೆ ಬಂಧಿಸುವಲ್ಲಿ ವಿಫಲವಾಗಿದೆ. ಪ್ರಕರಣದ ತನಿಖೆ ಕುರಿತು ನಿರ್ಲಕ್ಷ್ಯವಹಿಸದೆ ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಅವರು ಒತ್ತಾಯಿಸಿದರು.
ಎಎನ್‌ಐ ತನಿಖೆಗೆ ಒತ್ತಾಯ:
2001ನೆ ಇಸವಿಯಲ್ಲಿ ಬಂಟ್ವಾಳದ ಕಾವಳಕಟ್ಟೆಯಲ್ಲಿ ನಡೆದ ದಲಿತ ನಾಯಕ ಶಿವಪ್ಪ ಬಂಗೇರ ಹತ್ಯೆಯಿಂದ ಹಿಡಿದು ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆಯವರೆಗೆ ಈ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವ ಮೂಲಕ ಪ್ರಕರಣದ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಬೇಕು ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ ಆಗ್ರಹಿಸಿದರು.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಹೇಳಿಕೆಯೊಂದನ್ನು ನೀಡಿ, ಕಾಂಗ್ರೆಸ್ ಪಕ್ಷದಲ್ಲಿ ಯಾರೊಬ್ಬರು ಕೊಲೆ ಆರೋಪಿಗಳು ಇಲ್ಲ. ಅಂತಹ ಸಂಸ್ಕೃತಿ ನಮ್ಮದಲ್ಲ ಎಂದಿದ್ದರು. ಜಲೀಲ್ ಕರೋಪಾಡಿ ಹತ್ಯಾ ಪ್ರಕರಣದಲ್ಲಿ ನೈಜ ಆರೋಪಿಗಳ ಬಂಧನವಾಗಿಲ್ಲ. ತಕ್ಷಣ ನೈಜ ಆರೋಪಿಗಳನ್ನು ಬಂಧಿಸಬೇಕು ಎಂಬುದಾಗಿ ಓರ್ವ ಪಂಚಾಯತ್ ಸದಸ್ಯನ ಹೆಸರನ್ನು ಉಲ್ಲೇಖಿಸಿ ಮೃತನ ತಂದೆಯೇ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಸಚಿವರು ರಾಜೀನಾಮೆ ನೀಡಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುರುವಾರ ಬೆಳಗ್ಗೆ ಬಂಟ್ವಾಳಕ್ಕೆ ಆಗಮಿಸಲಿ ಶರತ್ ಮನೆಗೆ ಭೇಟಿ ನೀಡಲಿದ್ದಾರೆ. ಬಳಿಕ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಪ್ರಮುಖರಾದ ಜಿ.ಆನಂದ, ರಾಮದಾಸ್ ಬಂಟ್ವಾಳ, ದಿನೇಶ್ ಭಂಡಾರಿ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಕೃಷ್ಣಪ್ಪ ಪೂಜಾರಿ, ಶಾಂತಪ್ಪ ಪೂಜಾರಿ, ರಮಾನಾಥ ರಾಯಿ, ಸೀತಾರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







