ತಲೆ ಬೋಳಾಗುತ್ತಿದೆ ಎಂದು ಆತ್ಮಹತ್ಯಗೆ ಶರಣಾದಳು

ಭೋಪಾಲ್, ಜು. 12: ನಿನ್ನ ತಲೆ ಬೋಳಾಗುತ್ತದೆ ಎಂದು ಕನ್ನಡಿ ಅಣಕಿಸಿದಂತಾಯಿತು. ಜನರು ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಮನನೊಂದ 20ರ ಹರೆಯದ ಕಾಲೇಜು ವಿದ್ಯಾರ್ಥಿ ನಿಖಿತಾ ಲಾಡ್ ಮಧ್ಯಪ್ರದೇಶದಲ್ಲಿ ಚಲಿಸುತ್ತಿರುವ ರೈಲಿನಡಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯದ ರಾಜಧಾನಿ ಭೋಪಾಲ್‌ನಿಂದ 270 ಕಿ.ಮೀ. ದೂರದಲ್ಲಿರುವ ಖನ್ವಾಡ ಜಿಲ್ಲೆಯ ಪಿಪಾಲ್‌ಕೋಟ್ ಗ್ರಾಮದಲ್ಲಿ ಸೋಮವಾರ ನಿಖಿತಾ ಲಾಡ್ ರೈಲಿನಡಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಡ್ ಪಿಪಾಲ್‌ಕೋಟ್‌ನಿಂದ 25 ಕಿ.ಮೀ. ದೂರದಲ್ಲಿರುವ ಖಂಡ್ವಾ ಪಟ್ಟಣದಲ್ಲಿ ಮಾವನ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿಂದಲೇ ಕಾಲೇಜಿಗೆ ಹೋಗುತ್ತಿದ್ದರು.
ಸೋಮವಾರ ಸಂಜೆ ನಿಖಿತಾ ಕಾಲೇಜಿನಿಂದ ಮನೆಗೆ ಬಾರದ ಹಿನ್ನೆಲೆಯಲ್ಲೆ ಅವರ ಮಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರ ತಂಡ ಶೋಧ ಕಾರ್ಯಾಚರಣೆ ನಡೆಸಿದಾಗ ಅವರ ಮೃತದೇಹ ಪಿಪಾಲ್‌ಕೋಟ್ ಸಮೀಪದ ರೈಲ್ವೇ ಹಳಿಯಲ್ಲಿ ಪತ್ತೆಯಾಯಿತು. ಅವರ ಬ್ಯಾಗ್‌ನಲ್ಲಿ ಪತ್ತೆಯಾದ ಆತ್ಮಹತ್ಯೆ ಪತ್ರದಲ್ಲಿ ತಲೆ ಬೋಳಾಗುತ್ತಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿದೆ.
ಪತ್ರದಲ್ಲಿ ಹೆತ್ತವರ ಬಗ್ಗೆ ಪ್ರೀತಿ ವ್ಯಕ್ತಪಡಿಸಿರುವ ಅವರು, ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.







