ದುರ್ಬಲ ವರ್ಗಗಳ ಮೇಲಿನ ದಾಳಿ ವಿರುದ್ಧ ಕಾನೂನಾತ್ಮಕ ಪ್ರತಿರೋಧಕ್ಕೆ ಕರೆ
ಬೆಂಗಳೂರು, ಜು.12: ದೇಶದಲ್ಲಿ ದುರ್ಬಲ ವರ್ಗಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಬಳಸಿಕೊಂಡು ಪ್ರತಿರೋಧ ತೋರಬೇಕಾದ ಅನಿವಾರ್ಯತೆ ಇದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರೆ ನೀಡಿದೆ.
ಮಲಪ್ಪುರಂ ಜಿಲ್ಲೆಯ ಮಲಬಾರ್ ಹೌಸ್‌ನಲ್ಲಿ ನಡೆದ ರಾಷ್ಟ್ರೀಯ ಸಭೆಯಲ್ಲಿ ಎಲ್ಲರೂ ಭೇದ-ಭಾವ ಮರೆತು ವಿವಿಧ ಹಂತಗಳಲ್ಲಿ ಮೈತ್ರಿಯನ್ನು ರಚಿಸುವುದರ ಮೂಲಕ ಕೋಮುವಾದ ಮತ್ತು ಜಾತಿವಾದದ ದಾಳಿಗಳಿಗೆ ತುತ್ತಾಗುತ್ತಿರುವ ದಲಿತ, ಅಲ್ಪಸಂಖ್ಯಾತರ ಸಮುದಾಯವನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಿಸಿತು.
ಉದ್ರಿಕ್ತ ಕೋಮುವಾದಿ ಗುಂಪು ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಥಳಿಸಿ ಹತ್ಯೆ ಮಾಡುವುದು ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಕೋಮುವಾದಿ ಫ್ಯಾಶಿಸಂನ ಇನ್ನೊಂದು ಮುಖವಾಗಿದೆ. ಆರೆಸ್ಸೆಸ್ ನಿಯಂತ್ರಿತ ಬಿಜೆಪಿ ಸರಕಾರವಿರುವ ಭಾರತದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಥಳಿಸಿ ಹತ್ಯೆ ಮಾಡುವ ಪ್ರಕ್ರಿಯೆಯು ಅರಾಜಕತೆಯ ಒಂದು ಹೊಸ ಆಯಾಮವಾಗಿ ಮಾರ್ಪಟ್ಟಿದೆ ಎಂದು ಪಿಎಫ್‌ಐನ ಅಧ್ಯಕ್ಷೆ ಇ.ಅಬೂಬಕರ್ ಹೇಳಿದರು.
16 ವರ್ಷದ ಬಾಲಕ ಜುನೈದ್‌ನನ್ನು ಚಲಿಸುತ್ತಿರುವ ರೈಲಿನಲ್ಲಿ ಕ್ರೂರವಾಗಿ ಹತ್ಯೆ ನಡೆಸಿದರೂ, ಸ್ಥಳದಲ್ಲಿದ್ದ ನೂರಾರು ನಾಗರಿಕರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು. ಇದುವರೆಗೂ ಗೋರಕ್ಷಣೆಯ ಹೆಸರಿನಲ್ಲಿ 28 ಜನರನ್ನು ಹತ್ಯೆ ನಡೆಸಲಾಗಿದ್ದು, ಇದರಲ್ಲಿ 23 ಮಂದಿ ಮುಸ್ಲಿಮರಾಗಿದ್ದಾರೆ. 63 ಸ್ಥಳಗಳಲ್ಲಿ ಹಲ್ಲೆ ನಡೆದಿದ್ದು, ಅದರಲ್ಲಿ 32 ಸ್ಥಳಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ಯುದ್ಧದ ಹಾದಿಯ ಕಡೆಗೆ ಕರೆದೊಯ್ಯುತ್ತಿರುವ ಕೇಂದ್ರ ಸರಕಾರ, ಗೋ ಭಕ್ತಿಯ ಹೆಸರಿನಲ್ಲಿ ಜನರ ಹತ್ಯೆ ಮಾಡುತ್ತಿದೆ. ಅಲ್ಲದೆ, ಅಂಬೇಡ್ಕರ್ ಮತ್ತು ಗಾಂಧಿ ಹೆಸರು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ ಅವರು, ಪ್ರಧಾನಿ ಮೋದಿ ಸಾವರ್ಕರ್, ಗೋಡ್ಸೆ, ಗೋಳ್ವಾಲ್ಕರ್‌ರಂತಹ ಪರಂಪರೆಯನ್ನು ತ್ಯಜಿಸಬೇಕು. ಇಲ್ಲದಿದ್ದರೆ ಗಾಂಧಿ ಹಾಗೂ ಅಂಬೇಡ್ಕರ್‌ರನ್ನು ಜಪ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಭೆ, ಸುಪ್ರೀಂ ಕೋರ್ಟ್ ಆದೇಶದ ವಿರುದ್ಧದ ನಡೆಯನ್ನು ಕೂಡಲೇ ನಿಲ್ಲಿಸಬೇಕೆಂದು ಕೇಂದ್ರ ಮತ್ತು ಯುಪಿ ಸರಕಾರವನ್ನು ಒತ್ತಾಯಿಸಲಾಯಿತು. ಅಲ್ಲದೆ, ಕೂಡಲೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ, ಕೋರ್ಟ್‌ನ ಆದೇಶದ ಉಲ್ಲಂಘನೆ ಮಾಡುತ್ತಿರುವುದನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳಾದ ಓ.ಎಂ.ಎ.ಸಲಾಂ, ಅಬ್ದುಲ್ ವಾದ್ ಸೇಠ್, ಅನೀಸ್ ಅಹ್ಮದ್, ಮುಹಮ್ಮದ್ ಶಹಾಬುದ್ದೀನ್ ಕೆ.ಎಂ.ಶರೀಫ್ ಮತ್ತು ಇ.ಎಂ.ಅಬ್ದುರ್ರಹ್ಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







