ಮಣಿಪಾಲ ವಿದ್ಯಾರ್ಥಿನಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಉಡುಪಿ, ಜು.12: ಮಣಿಪಾಲ ವಿವಿಯ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯೂಟಿಕಲ್‌ನ ವಿದ್ಯಾರ್ಥಿನಿ ಸಂಗೀತಾ ಅಯ್ಯರ್ ಅವರು ಸ್ವೀಡನ್‌ನ ಜೋನ್‌ಕಾಪಿಂಗ್‌ನಲ್ಲಿ ಮೇ ತಿಂಗಳಲ್ಲಿ ನಡೆದ ‘ಯುರೋ ಹಾರ್ಟ್‌ಕೇರ್ -2017’ರಲ್ಲಿ ಭಾರತವನ್ನು ಪ್ರತಿನಿಧಿಸಿ ‘ಅತ್ಯುತ್ತಮ ರಿಸರ್ಚ್ ಪೋಸ್ಟರ್’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಅಮೆರಿಕ, ಬ್ರಿಟನ್, ಜಪಾನ್, ರಷ್ಯ, ನೆದರ್ಲೆಂಡ್, ಪೋರ್ಚುಗಲ್, ನಾರ್ವೆ, ಸ್ಪೈನ್, ಟರ್ಕಿ, ಐಸ್‌ಲ್ಯಾಂಡ್ ಹಾಗೂ ಇನ್ನೂ ಅನೇಕ ದೇಶಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಸಂಗೀತಾ ಅಯ್ಯರ್ ಪ್ರಸ್ತುತ ಪಡಿಸಿದ ಸಂಶೋಧನಾ ಪೋಸ್ಟರ್ ಅತ್ಯುತ್ತಮವೆಂದು ಘೋಷಿಸಲ್ಪಟ್ಟು ಬಹುಮಾನ ಪಡೆಯುವ ಮೂಲಕ ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟಿತು.
ಇದರೊಂದಿಗೆ ಸಂಗೀತಾ ಅವರು ವಿಶ್ವದ ಅತ್ಯುತ್ತಮ 10 ಮಂದಿ ಸಂಶೋಧನಾ ವಿದ್ವಾಂಸರಲ್ಲಿ ಒಬ್ಬರಾಗಿ ಆಯ್ಕೆಯಾಗಿ ಪ್ರತಿಷ್ಠಿತ ಸಿಸಿಎನ್‌ಎಪಿ ಟ್ರಾವಲ್ ಸ್ಕಾಲರ್‌ಶಿಪ್‌ನ್ನು ಪಡೆದರಲ್ಲದೇ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಆಯೋಜಿಸುವ ಕಾರ್ಡಿಯೋವಾಸ್ಕುಲಾರ್ ನರ್ಸಿಂಗ್ ಕಾಂಗ್ರೆಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದರು.
ಸಂಗೀತಾ ಅಯ್ಯರ್ ಅವರು ಸಮುದಾಯಗಳಲ್ಲಿರುವ ಹೃದಯದ ರೋಗಗಳನ್ನು ತಡೆಯುವ ಕುರಿತಂತೆ ‘ಪ್ರಿವೆಂಟಿವ್ ಕಾರ್ಡಿಯೋಲಜಿ’ ವಿಷಯದ ಕುರಿತು ಕೆಲಸ ಮಾಡುತಿದ್ದಾರೆ. ಈ ಪೋಸ್ಟರ್ ಪ್ರಸ್ತುತ ಪಡಿಸುವ ಸ್ಪರ್ಧೆಯಲ್ಲಿ ಅಮೆರಿಕ, ರಷ್ಯ, ಬ್ರಿಟನ್ ಸೇರಿದಂತೆ 15ಕ್ಕೂ ಅಧಿಕ ಪ್ರಮುಖ ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಸಂಗೀತಾ ಅವರು ಮೇ 21ರಿಂದ 24ರವರೆಗೆ ಸ್ವೀಡನ್‌ನ ಸ್ಟಾಕ್‌ಹೋಮ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಫಾರ್ಮಸ್ಯೂಟಿಕಲ್ ಫೆಡರೇಷನ್‌ನ 6ನೇ ಫಾರ್ಮಸ್ಯೂಟಿಕಲ್ ಸಾಯನ್ಸ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಮಣಿಪಾಲ ವಿವಿ ಹಾಗೂ ಎಂಕಾಪ್‌ನ್ನು ಪ್ರತಿನಿಧಿಸಿದ್ದರು. ದೇಶದ ಖ್ಯಾತನಾಮ ಹೃದ್ರೋಗ ತಜ್ಞ ಡಾ.ರಂಜನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಗೀತಾ ತನ್ನ ಸಂಶೋಧನೆ ಕೈಗೊಂಡಿದ್ದರು.
ತನ್ನೆಲ್ಲಾ ಸಾಧನೆಗೆ ತನ್ನ ಹೆತ್ತವರ ಪ್ರೋತ್ಸಾಹ ಹಾಗೂ ನನ್ನ ಪ್ರಾಧ್ಯಾಪಕರು ಮತ್ತು ಸ್ನೇಹಿತರ ಬೆಂಬಲವೇ ಕಾರಣ ಎಂದು ಸಂಗೀತಾ ಅಭಿಪ್ರಾಯಪಟ್ಟರು.







