ಅಂಜುಮನ್ ವಿದ್ಯಾರ್ಥಿನೀಯರು ಜಿಲ್ಲೆಗೆ ಪ್ರಥಮ ಮತ್ತು ದ್ವಿತೀಯ
ಪಿಯುಸಿ ಮರು ಮೌಲ್ಯಮಾಪನ ಫಲಿತಾಂಶ
ಭಟ್ಕಳ, ಜು.12: ಮಾರ್ಚ್ 2017ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಘೋಷಣೆಯ ಬಳಿಕ ಹಲವು ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತೃಪ್ತಿ ನೀಡದ ಕಾರಣ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಮರು ಮೌಲ್ಯಮಾಪನದ ಫಲಿತಾಂಶ ಹೊರಬಂದಿದ್ದು, ಉತ್ತರಕನ್ನಡ ಜಿಲ್ಲೆಗೆ ಇಲ್ಲಿನ ಅಂಜುಮನ್ ಬಾಲಕೀಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನೀಯರು ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಪಿಯುಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಧಿಕೃತ ಮಾಹಿತಿಯಂತೆ, ಭಟ್ಕಳ ಅಂಜುಮನ್ ಬಾಲಕೀಯರ ಕಾಲೇಜಿನ ವಿದ್ಯಾರ್ಥಿನೀಯರಾದ ಮರಿಯಮ್ ಹನೀನ್ ಪೇಶ್ಮಾಮ್ 600 ರಲ್ಲಿ 568( ಶೇ.94.66 ಅಂಕ) ಪಡೆಯುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇದೇ ಕಾಲೇಜಿನ ಆಯಿಶಾ ಉರೂಜ್ ಶೇ.94.33 ಅಂಕ ಪಡೆಯುವುದರ ಮೂಲಕ ಜಿಲ್ಲೆಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಫಲಿತಾಂಶವನ್ನು ದೃಢೀಕರಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ.ಫರ್ಝಾನಾ ಮೊಹತೆಶಮ್, ತಮ್ಮ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುದ್ದಕ್ಕಾಗಿ ಸಂತಸವನ್ನು ವ್ಯಕ್ತಪಡಿಸಿದ್ದು, ವಿದ್ಯಾರ್ಥಿನೀಯರನ್ನು ಅಭಿನಂದಿಸಿದ್ದಾರೆ.
ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜುಕಾಕೋ ಅಬ್ದುಲ್ ರಹೀಮ್, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕೇವಲ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಮಾತ್ರ ಸಾಧನೆ ಮಾಡುತ್ತಿಲ್ಲ. ಬಲದಾಗಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿವರ್ಷ ಹತ್ತು ರ್ಯಾಂಕುಗಳಲ್ಲಿ ಸ್ಥಾನವನ್ನು ಪಡೆದು ಜಿಲ್ಲೆ ಹಾಗೂ ಸಂಸ್ಥೆಗೆ ಹೆಸರು ತರುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







