ಹೆಜಮಾಡಿ ನೂತನ ಗ್ರಾಪಂ ಕಚೇರಿಗೆ ಶಿಲಾನ್ಯಾಸ

ಪಡುಬಿದ್ರೆ, ಜು. 12: ಮೂರು ಕೋಟಿ ವೆಚ್ಚದಲ್ಲಿ ಹೆಜಮಾಡಿ ಬಸ್ತಿಪಡ್ಪು ಕ್ರೀಡಾಂಗಣ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೊದಲ ಹಂತದ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಹೆಜಮಾಡಿಯಲ್ಲಿ ಬುಧವಾರ ಗ್ರಾಪಂನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಹೆಜಮಾಡಿ ಬಂದರು ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ವಿವಿಧ ಮೂಲಗಳಿದ ಅನುದಾನ ಒದಗಿಸಲಾಗುವುದು. ಈ ಭಾಗದ ಬೃಹತ್ ಯೋಜನೆಗಳಾದ ಯುಪಿಸಿಎಲ್ ಹಾಗೂ ಸುಜ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗಳ ಸಿಎಸ್‌ಆರ್ ಅನುದಾನವನ್ನು ಪಡೆಯಲಾಗುವುದು ಎಂದು ಹೇಳಿದರು.
ಹೆಜಮಾಡಿ ಗ್ರಾಮ ಪಂ. ವ್ಯಾಪ್ತಿಯ ಕೊಕ್ರಾಣಿ ಕುದುರು ಸಹಿತ ಮೂರು ಕಡೆ ಸಂಪರ್ಕ ಸೇತುವೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಿವಿಧ ರಸ್ತೆಗಳ ಅಭಿವೃದ್ಧಿಗೆ ಒತ್ತುವ ಮೂಲಕ 21 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಮೀಸಲು ನಿಯಮದಿಂದ ಗ್ರಾಮದ ಕಟ್ಟಕಡೆಯ ವ್ಯಕ್ತಿಯು ಗ್ರಾ. ಪಂ. ಅಧಿಕಾರ ಪಡೆಯುವ ಅವಕಾಶ ಲಭಿಸಿದೆ. ನೂರು ಸೇವೆ ನೀಡುವ ಬಾಪೂಜಿ ಕೇಂದ್ರಗಳನ್ನು ಗ್ರಾಪಂಗಳಲ್ಲಿ ಅರಭಿಸಲಾಗಿದೆ. ಎಲ್ಲಾ ಸೇವೆಗಳು ವಿಳಂಬವಿಲ್ಲದೆ ಜನರಿಗೆ ಲಭಿಸುವಂತಾಗಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬಿ ದರ್ಜೆಗೇರಿಸಲು ಸರಕಾರ ಗಮನಹರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ಒಟ್ಟು ರೂ. 80 ಲಕ್ಷ ವೆಚ್ಚದಲ್ಲಿ ಗ್ರಾಪಂ ಕಟ್ಟಡ ನಿರ್ಮಾಣಗೊಳ್ಳಿದ್ದು, ಗ್ರಾಪಂ ಈಗಾಗಗಲೇ ರು. 15 ಲಕ್ಷ ಮೊತ್ತವನ್ನು ಕಾಯ್ದಿರಿಸಿದೆ. ಜನಪ್ರತಿನಿಧಿಗಳ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಗ್ರಾಪಂ ಅಧಕ್ಷೆ ವಿಶಾಲಾಕ್ಷಿ ಪುತ್ರನ್ ತಿಳಿಸಿದರು.
ಮುಲ್ಕಿ ಚರ್ಚ್‌ನ ಧರ್ಮಗುರು ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರೆ , ತಾಪಂ ಸದಸ್ಯೆ ರೇಣುಕಾ ಪುತ್ರನ್, ಮಾಜಿ ಸದಸ್ಯರಾದ ನಾರಾಯಣ ಪೂಜಾರಿ, ನವೀಚಂದ್ರ ಶೆಟ್ಟಿ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ, ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್, ಸದಸ್ಯ ಪ್ರಾಣೇಶ್ ಹೆಜಮಾಡಿ, ಪಿಡಿಒ ಮಮತಾ ಶೆಟ್ಟಿ ಇದ್ದರು.
ಅಂಬೇಡ್ಕರ್ ಭವನಕ್ಕೆ ಮನವಿ: ಹೆಜಮಾಡಿ ಗ್ರಾಪಂನ ಈಗಿರುವ ಕಟ್ಟಡದ ಹಿಂಭಾಗದಲ್ಲಿ ಸಮಾಜ ಮಂದಿರವಿದ್ದು, ಇದರ ಮುಂಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಶಾಸಕರಿಗೆ ಮನವಿ ಮಾಡಿದರು. ಇದಕ್ಕುತ್ತರಿಸಿದ ಶಾಸಕ ವಿನಯಕುಮಾರ್ ಸೊರಕೆ, ಗ್ರಾಪಂ ಈ ಬಗ್ಗೆ ನಿರ್ಣಯ ಕೈಗೊಂಡ ಬಳಿಕ ಯೋಜನೆ ರೂಪಿಸಿ ಸರಕಾರದಿಂದ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.







