ಕಠಿಣ ಪರಿಶ್ರಮದಿಂದ ಯಶಸ್ವಿ ಸಾಧ್ಯ: ಪ್ರೊ.ಎಂ.ಎಲ್.ಸುರೇಶನಾಥ್

ಕೊಣಾಜೆ, ಜು. 12: ಯಾವುದೇ ಒಂದು ಚಿಂತನೆಯು ಕಾರ್ಯರೂಪಕ್ಕೆ ಬರಬೇಕಾದರೆ ಕಠಿಣ ಪರಿಶ್ರಮ ಅತ್ಯಗತ್ಯ. ಹಾಗೆಯೇ ಉದ್ದೇಶಿತ ಗುರಿಗೆ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗದೇ ಇದ್ದಲ್ಲಿ, ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗೆ ಎಷ್ಟೇ ಬೆವರಿಳಿಸಿದರೂ ವ್ಯರ್ಥ ಎಂದು ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನ ಹೆಚ್ ಆರ್ ಡಿ ವಿಭಾಗದ ವಿಶ್ರಾಂತ ನಿರ್ದೇಶಕ ಪ್ರೊ.ಎಂ.ಎಲ್. ಸುರೇಶನಾಥ್ ಅಭಿಪ್ರಾಯಪಟ್ಟರು.
ಅವರು ಕೊಣಾಜೆ ನಡುಪದವಿನ ಪಿ.ಎ ಪಾಲಿಟೆಕ್ನಿಕ್ ವಿಭಾಗದ ಪ್ರಸಕ್ತ ವರ್ಷದ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಆಲೋಚನೆಗಳು ಗ್ರಹಿಕೆಯನ್ನು ಬದಲಾಯಿಸಬಹುದು. ಸ್ವಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ . ಎಲ್ಲರೂ ಯಶಸ್ವಿಯಾದರೂ ಪರಿಣಾಮಕಾರರಲ್ಲ. ಪರಿಣಾಮಕಾರಿಯಾದ ಯಶಸ್ಸು ಜೀವನದಲ್ಲಿನ ಮಹತ್ತರ ಸಾಧನೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮುಂದುವರಿಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಪಿ ಸೂಫಿ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ನಿಯಮದಂತೆ ವರ್ತಿಸುವ ಅನಿವಾರ್ಯತೆ ಇದೆ. ಎಲ್ಲವೂ ಅವರು ಶಿಕ್ಷಣವನ್ನು ಉತ್ತಮವಾಗಿ ಪಡೆಯುವ ದೃಷ್ಟಿಯಿಂದ ರೂಪಿಸಲಾದ ನಿಯಮಗಳಾಗಿವೆ ಎಂದರು.
ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್, ಎಂಬಿಎ ವಿಭಾಗದ ನಿರ್ದೇಶಕ ಡಾ.ಬೀರಾನ್ ಮೊಯ್ದೀನ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಅಕಾಡೆಮಿಕ್ ನಿರ್ದೇಶಕ ಡಾ.ಸರ್ಫಾರ್ ಹಾಷಿಂ ಮುಖ್ಯ ಅತಿಥಿಗಳಾಗಿದ್ದರು.
ಕಾಲೇಜು ಪಿಆರ್‌ಒ ಅಮರೇಶ್ ಅತ್ತಾವರ್ ಉಪಸ್ಥಿತರಿದ್ದರು. ಪ್ರೊ.ಅಜಿತ್ ಕುಮಾರ್ ವಾಸು ನಿರ್ವಹಿಸಿದರು. ಪ್ರೊ.ಆಲಿ ಅಶ್ರಫ್ ಸ್ವಾಗತಿಸಿದರು. ಪಿ.ಎ. ಪಾಲಿಟೆಕ್ನಿಕ್ ಕಾಲೇಜು ಉಪಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್ ವಂದಿಸಿದರು.







