1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.12: ರಾಜ್ಯದಲ್ಲಿ ನಿರೀಕ್ಷಿತ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಳೆಗಾಲದ ಅವಧಿ ಹೊರತುಪಡಿಸಿ 9 ತಿಂಗಳಿಗೆ ಅನ್ವಯಿಸುವಂತೆ ಅಲ್ಪಾವಧಿಗೆ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು, ರೈತರು, ಕೈಗಾರಿಕೆಗಳಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ವಿದ್ಯುತ್ ಖರೀದಿ ಬೆಲೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಲು ಆಲೋಚನೆ ನಡೆಸಲಾಗಿದೆ. ವಿದ್ಯುತ್ ಖರೀದಿ ಪ್ರಕ್ರಿಯೆಯು 40-45 ದಿನಗಳ ನಂತರ ಪ್ರಾರಂಭವಾಗುವ ಸಾಧ್ಯತೆಯಿದೆ. ಕಲ್ಲಿದ್ದಲು ನಿಕ್ಷೇಪಗಳನ್ನು ನಮಗೆ ಹಂಚಿಕೆ ಮಾಡುವ ಸಂಬಂಧ ಕೇಂದ್ರ ಇಂಧನ ಸಚಿವರೊಂದಿಗೆ ಚರ್ಚೆ ನಡೆಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯದ ರೈತರಿಗೆ ಸುಮಾರು 10 ಸಾವಿರ ಕೋಟಿ ರೂ.ಗಳ ವಿದ್ಯುತ್‌ನ್ನು ನೀಡುತ್ತಿದ್ದೇವೆ. ಮಳೆಯಿಲ್ಲದ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಬಳ್ಳಾರಿಯಲ್ಲಿರುವ ಘಟಕಕ್ಕೆ ನೀರು ಬರುತ್ತಿಲ್ಲ. ಕಲ್ಲಿದ್ದಲನ್ನು ಕೇಂದ್ರ ಸರಕಾರದಿಂದಲೆ ನೇರವಾಗಿ ಖರೀದಿ ಮಾಡುತ್ತಿದ್ದೇವೆ. ಬಹಳ ದೂರದಿಂದ ಕಲ್ಲಿದ್ದಲು ತರುವುದರಿಂದ ನಮಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಸುಪ್ರೀಂಕೋರ್ಟ್‌ನಲ್ಲಿ ಕಲ್ಲಿದ್ದಲು ಸಂಬಂಧ ಕೆಲವು ವ್ಯಾಜ್ಯಗಳಿರುವುದರಿಂದ ವರ್ಷಕ್ಕೆ ಸುಮಾರು 600 ಕೋಟಿ ರೂ.ಗಳಷ್ಟು ನಮಗೆ ನಷ್ಟವಾಗುತ್ತಿದೆ. 2011ರಲ್ಲಿ 7814 ದಶಲಕ್ಷ ಯೂನಿಟ್, 2012ರಲ್ಲಿ 11046 ದಶಲಕ್ಷ ಯೂನಿಟ್, 2013ರಲ್ಲಿ 6400 ದಶಲಕ್ಷ ಯೂನಿಟ್, 2014ರಲ್ಲಿ 5915 ದಶಲಕ್ಷ ಯೂನಿಟ್, 2016ರಲ್ಲಿ 4882 ದಶಲಕ್ಷ ಯೂನಿಟ್ ವಿದ್ಯುತ್‌ನ್ನು ಖರೀದಿಸಲಾಗಿತ್ತು ಎಂದು ಅವರು ವಿವರಣೆ ನೀಡಿದರು.







