ಮುಂದಿನ ತಿಂಗಳು 16 ಗಣಿಗಳ ಹರಾಜು: ವಿನಯ್‌ಕುಲಕರ್ಣಿ
.jpg)
ಬೆಂಗಳೂರು, ಜು.12: ರಾಜ್ಯದಲ್ಲಿ ‘ಸಿ’ ದರ್ಜೆಯ 56 ಗಣಿಗಳಿವೆ. ಈ ಪೈಕಿ 14 ಗಣಿಗಳನ್ನು ನಾವು ಹರಾಜಿಗೆ ಇಟ್ಟಿದ್ದೆವು. ಆದರೆ, ಕೇವಲ 7 ಮಾತ್ರ ಹರಾಜಾದವು. ಮುಂದಿನ ತಿಂಗಳು 16 ಗಣಿಗಳನ್ನು ಹರಾಜಿಗೆ ಇಡಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ಕುಲಕರ್ಣಿ ತಿಳಿಸಿದ್ದಾರೆ.
ದೀರ್ಘಾವಧಿಗೆ ಕಬ್ಬಿಣದ ಅದಿರನ್ನು ಪೂರೈಕೆ ಮಾಡುವ ಕುರಿತು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ 2011ರಲ್ಲಿ 11 ಸಾವಿರ ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡಲಾಗಿತ್ತು. 2013-14ರಲ್ಲಿ ಈ ಪ್ರಮಾಣವು 9 ಸಾವಿರ ದಶಲಕ್ಷ ಮೆಟ್ರಿಕ್ ಟನ್‌ಗೆ ಕುಸಿಯಿತು. ಇದರಿಂದಾಗಿ, ಉಕ್ಕಿನ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅವರು ಹೇಳಿದರು.
ಇವತ್ತು ರಾಜ್ಯದಲ್ಲಿ 26 ಸಾವಿರ ದಶಲಕ್ಷ ಮೆಟ್ರಿಕ್ ಟನ್ ಅದಿರು ಉತ್ಪಾದನೆ ಮಾಡಲಾಗುತ್ತಿತ್ತು. ಶೀಘ್ರವೆ 30 ಸಾವಿರ ದಶಲಕ್ಷ ಮೆಟ್ರಿಕ್ ಟನ್‌ಗೆ ತಲುಪುವ ನಿರೀಕ್ಷೆಯಿದೆ. 2020ರ ವೇಳೆಗೆ ಈ ಪ್ರಮಾಣ 54 ಸಾವಿರ ದಶಲಕ್ಷ ಮೆಟ್ರಿಕ್ ಟನ್‌ಗೆ ತಲುಪಬೇಕಿದೆ ಎಂದು ವಿನಯ್‌ಕುಲಕರ್ಣಿ ತಿಳಿಸಿದರು.
ಈ ಸಂಬಂಧ ರಾಜ್ಯ ಸರಕಾರ ಹಾಗೂ ಗಣಿ ಮಾಲಕರು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಲಿದ್ದೇವೆ. ಗಣಿಗಾರಿಕೆಗೆ ಸಂಬಂಧಿಸಿದ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ)ಯು ಎರಡು ಮೂರು ದಿನಗಳಲ್ಲಿ ತನ್ನ ವರದಿ ನೀಡಲಿದೆ. ಪ್ರಸ್ತುತ 30 ರಿಂದ 40 ಸಾವಿರ ದಶಲಕ್ಷ ಮೆಟ್ರಿಕ್ ಟನ್ ಅದಿರು ಉತ್ಪಾದನೆಗೆ ನಾವು ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಎಂಎಸ್‌ಇಎಲ್ ಮೂಲಕ ಗಣಿಗಳನ್ನು ತ್ವರಿತವಾಗಿ ಪರಿಶೋಧನೆ ಮಾಡಿಸಲು ನಿರ್ಧರಿಸಲಾಗಿದೆ. ‘ಸಿ’ ದರ್ಜೆ ಗಣಿಗಳನ್ನು ಹೊರತುಪಡಿಸಿ ಸುಮಾರು 500 ಗಣಿ ಬ್ಲಾಕ್‌ಗಳು ನಮ್ಮಲ್ಲಿ ಲಭ್ಯವಿದೆ. ಅವುಗಳನ್ನು ಬಳಸಿಕೊಂಡರೆ ರಾಜ್ಯ ಸರಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ ಎಂದು ವಿನಯ್‌ಕುಲಕರ್ಣಿ ಹೇಳಿದರು.







