ಪಿ.ಯು. ಫಲಿತಾಂಶ: ಉ.ಕ. ಜಿಲ್ಲೆಯಲ್ಲಿ ಭಟ್ಕಳದ ವಿದ್ಯಾರ್ಥಿನಿಯರಿಗೆ ಪ್ರಥಮ, ದ್ವಿತೀಯ ರ‍್ಯಾಂಕ್

ಭಟ್ಕಳ, ಜು. 12: ಮಾರ್ಚ್ 2017ರಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾದ ಬಳಿಕ ಕೆಲವು ವಿದ್ಯಾರ್ಥಿಗಳು ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮರು ವೌಲ್ಯಮಾಪನದಲ್ಲಿ ಭಟ್ಕಳದ ಅಂಜುಮಾನ್ ಮಹಿಳಾ ಪಿ.ಯು. ಕಾಲೇಜಿನ ವಿದ್ಯಾರ್ಥಿ ನಿ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಪಡೆದಿದ್ದರು. ಆದರೆ, ಮರು ವೌಲ್ಯಮಾಪನದ ಫಲಿತಾಂಶ ಪ್ರಕಟವಾದ ಬಳಿಕ ಎರಡನೇ ರ‍್ಯಾಂಕ್ಗೆ ಇಳಿದಿದ್ದಾರೆ.
ಉತ್ತರಕನ್ನಡ ಜಿಲ್ಲಾ ಪಿ.ಯು. ಶಿಕ್ಷಣ ಇಲಾಖೆ ಕಚೇರಿ ನೀಡಿದ ವಿವರದ ಪ್ರಕಾರ ಭಟ್ಕಳದ ಅಂಜುಮಾನ ಪಿ.ಯು. ಮಹಿಳಾ ಕಾಲೇಜಿನ ಮರಿಯಮ್ಮ ಹನೀನ್ 600 ಅಂಕಗಳಲ್ಲಿ 568 ಅಂಕ ಪಡೆಯುವ ಮೂಲಕ ಶೇ. 94.66 ಫಲಿತಾಂಶ ಪಡೆದಿದ್ದಾರೆ. ಇದರೊಂದಿಗೆ ಅವರು ಜಿಲ್ಲೇಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಅವರು ಇರ್ಷಾದ್ ಪೆಶ್ಮಾಮ್ ಅವರ ಪುತ್ರಿ.
ಜಿಲ್ಲೆಯಲ್ಲಿ ಎರಡನೇ ರ‍್ಯಾಂಕ್ ಪಡೆದಿರುವುದು ಕೂಡ ಜಿಲ್ಲೆಯ ಅಂಜುಮಾನ್ ಪಿ.ಯು. ಮಹಿಳಾ ಕಾಲೇಜಿನಿ ಅಯೇಷಾ ಉರೂಜ್. ಅವರು 566 ಅಂಕ ಪಡೆದಿದ್ದು, ಶೇ. 94.33 ಫಲಿತಾಂಶ ಪಡೆದಿದ್ದಾರೆ. ಅವರು ಮುಹಮ್ಮದ್ ಇರ್ಫಾನ್ ಅಜೈಬಂ ಅವರ ಪುತ್ರಿ.
ಈ ಇಬ್ಬರು ವಿದ್ಯಾರ್ಥಿಗಳಲ್ಲದೆ ಕಾರವಾರ ಸರಕಾರಿ ಕಾಲೇಜಿನ ಓಂಕಾರ್ ಸಂತೋಷ್ ಪುಷ್ಕರ್, ಹಿರೇಗುತ್ತಿ ಸರಕಾರಿ ಪಿ.ಯು. ಕಾಲೇಜಿನ ಅಂಕಿತ್ ಪ್ರಭಾಕರ್ ನಾಯ್ಕಿ ತಲಾ 566 ಅಂಕ ಗಳಿಸಿ ಜಿಲ್ಲೆಯಲ್ಲಿ 2ನೇ ರ‍್ಯಾಂಕ್ ಪಡೆದಿದ್ದಾರೆ.
ಆರಂಭದಲ್ಲಿ ಫಲಿತಾಂಶ ಪ್ರಕಟವಾದಾಗ ಮರಿಯಮ್ಮ ಹನೀನ್ 562 ಅಂಕ ಪಡೆದಿದ್ದರು. ಆದರೆ, ತನ್ನ ಅಂಕದ ಬಗ್ಗೆ ಅತೃಪ್ತಿ ಹೊಂದಿದ ಅವರು ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರು ವೌಲ್ಯಮಾಪನದ ಬಳಿಕ ಅವರಿಗೆ 6 ಅಂಕ ಹೆಚ್ಚುವರಿಯಾಗಿ ದೊರಕಿತು. ಇದು ಮರಿಯಮ್ಮಾ ಹನೀನ್ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಥಮ ರ‍್ಯಾಂಕ್ ಪಡೆಯಲು ಕಾರಣವಾಯಿತು.
ಅಂಜುಮಾನ್ ಕಾಲೇಜಿನ ಪ್ರಾಂಶುಪಾಲೆ ಪರ್ಝಾನಾ ಮೊಹ್ತೇಶಾಮ್, ಉಪ ಪ್ರಾಂಶುಪಾಲೆ ತಾಲಿಯಾ ವೌಲಿಮ್ ಪ್ರಥಮ ಹಾಗೂ ದ್ವಿತೀಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಅಂಜುಮಾನ್ ಹಾಮಿ ಎ ಮುಸ್ಲಿಮೀನ್‌ನ ಅಧ್ಯಕ್ಷ ಅಬ್ದುಲ್ ರಹೀಮ್ ಜುಕ್ಕು, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯಿಲ್, ಹೆಚ್ಚುವರಿ ಕಾರ್ಯದರ್ಶಿ ಇಸಾಕ್ ಶಹಾಬಂದ್ರಿ ಹಾಗೂ ಇತರ ಪದಾಧಿಕಾರಿಗಳು ಹಾಗೂ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.







