ಜಾರ್ಖಂಡ್: ಐಟಿ ಆಯುಕ್ತರ ನಿವಾಸಕ್ಕೆ ಸಿಬಿಐ ದಾಳಿ: 3.5 ಕೋ.ರೂ. ನಗದು, 5 ಕಿ.ಗ್ರಾಂ. ಚಿನ್ನ ವಶಕ್ಕೆ

ಹೊಸದಿಲ್ಲಿ, ಜು.12: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್‌ನ ಪ್ರಧಾನ ಆದಾಯ ತೆರಿಗೆ ಆಯುಕ್ತ ತಪಸ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು 3.5 ಕೋಟಿ ರೂ.ನಗದು, 5 ಕಿ.ಗ್ರಾಂ. ಚಿನ್ನ (1.4 ಕೋ.ರೂ.ಮೌಲ್ಯ) ವಶಕ್ಕೆ ಪಡೆದಿದ್ದಾರೆ.
ಕೋಲ್ಕತಾದ 18 ಮತ್ತು ರಾಂಚಿಯ 5 ಸ್ಥಳಗಳಲ್ಲಿ ಸಿಬಿಐ ಕಾರ್ಯಾಚರಣೆ ನಡೆಸಿದೆ . ತಪಸ್ ಕುಮಾರ್ ದತ್ತ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಕ್ತಾರ ಆರ್.ಕೆ.ಗೌರ್ ತಿಳಿಸಿದ್ದಾರೆ. 2016-17ರಲ್ಲಿ ಆದಾಯ ತೆರಿಗೆ ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಮತ್ತು ಕೋಲ್ಕತಾದ ಉದ್ಯಮಿಗಳ ಜತೆ ಸೇರಿ ಕ್ರಿಮಿನಲ್ ಸಂಚು ನಡೆಸಿದ್ದ ತಪಸ್ ಕುಮಾರ್, ಚಾರ್ಟರ್ಡ್ ಅಕೌಂಟೆಂಟ್ ಮೂಲಕ ಉದ್ಯಮಿಗಳಿಗೆ ಕಡಿಮೆ ತೆರಿಗೆ ಹೊರೆ ಬೀಳುವಂತೆ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಲಂಚದ ರೂಪದಲ್ಲಿ ಹಣ ಸಂದಾಯವಾಗುತ್ತಿತ್ತು ಎಂದು ಗೌರ್ ತಿಳಿಸಿದ್ದಾರೆ.
ತಪಸ್ ಕುಮಾರ್ ದತ್ತ, ಆದಾಯತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಅರವಿಂದ್ ಕುಮಾರ್, ಆದಾಯ ತೆರಿಗೆ ಅಧಿಕಾರಿ ರಂಜಿತ್ ಕುಮಾರ್ ಲಾಲ್, ಮತ್ತೋರ್ವ ಆದಾಯ ತೆರಿಗೆ ಅಧಿಕಾರಿ, ಚಾರ್ಟರ್ಡ್ ಅಕೌಂಟೆಂಟ್ ಪವನ್ ವೌರ್ಯ ವಿರುದ್ಧ ಸಿಬಿಐ ಇತ್ತೀಚೆಗೆ ಪ್ರಕರಣ ದಾಖಲಿಸಿತ್ತು.
ಕೋಲ್ಕತಾ ಮೂಲದ ಉದ್ಯಮಿ ವಿಶ್ವನಾಥ್ ಅಗರ್ವಾಲ್, ಸಂತೋಷ್ ಚೌಧರಿ, ಸಂತೋಷ್ ಶಾ, ಆಕಾಶ್ ಅಗರ್‌ವಾಲ್, ಅರವಿಂದ್ ಅಗರ್ವಾಲ್ ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.





