ಐಸಿಸ್ ಸಂಪರ್ಕ ಶಂಕೆ: ಕೇರಳ ವ್ಯಕ್ತಿ ದಿಲ್ಲಿಯಲ್ಲಿ ಬಂಧನ

ಹೊಸದಿಲ್ಲಿ, ಜು. 12: ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆಯಲ್ಲಿ ಟರ್ಕಿಯಿಂದ ಗಡಿಪಾರಿಗೆ ಒಳಗಾಗಿರುವ ಕೇರಳದ ವ್ಯಕ್ತಿಯೋರ್ವನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಟರ್ಕಿಯಿಂದ ಕಳೆದ ವಾರ ಗಡಿಪಾರಿಗೆ ಒಳಗಾಗಿರುವ ಕೇರಳದ ಕಣ್ಣೂರು ನಿವಾಸಿ 32ರ ಹರೆಯದ ಶಹಾಜಹಾನ್‌ನನ್ನು ಬಂಧಿಸಲಾಗಿದೆ. ಆತ ಎರಡನೇ ಬಾರಿ ಟರ್ಕಿಗೆ ತೆರಳಿದ್ದ. ಎರಡೂ ಸಂದರ್ಭಗಳಲ್ಲೂ ನಕಲಿ ಪಾಸ್‌ಪೋರ್ಟ್‌ನಲ್ಲಿ ತೆರಳಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಗಡಿಪಾರು ಮಾಡಲಾಗಿದೆ.
ಟರ್ಕಿ ಗಡಿಪಾರು ಮಾಡಿದ ಬಳಿಕ ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಆತನನ್ನು ವಶಕ್ಕೆ ತೆಗೆದುಕೊಂಡಿದೆ. ಟರ್ಕಿಯಿಂದ ಸಿರಿಯಾಕ್ಕೆ ತೆರಳಿ ಇಸ್ಲಾಮಿಕ್ ಸ್ಟೇಟ್‌ನ ಸದಸ್ಯನಾಗುವ ಬಯಕೆಯನ್ನು ಆತ ಹೊಂದಿರಬೇಕು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದು ಆತ ಸಿರಿಯಾ ತಲಪಲು ನಡೆಸುತ್ತಿರುವ ಎರಡನೇ ಪ್ರಯತ್ನ. ಫೆಬ್ರವರಿಯಲ್ಲಿ ಆತ ನಕಲಿ ಪಾಸ್‌ಪೋರ್ಟ್ ಬಳಸಿ ಚೆನ್ನೈನಿಂದ ಟರ್ಕಿಗೆ ತೆರಳಲು ಪ್ರಯತ್ನಿಸಿದ್ದ. ಆದಾಗ್ಯೂ, ಆತನನ್ನ ಟರ್ಕಿಯಿಂದ ಬಂಧಿಸಿ ಗಡಿಪಾರು ಮಾಡಲಾಯಿತು. ಬಳಿಕ ಮತ್ತೊಂದು ನಕಲಿ ಪಾಸ್‌ಪೋರ್ಟ್ ಮಾಡಿ ಚೆನ್ನೈಯಿಂದ ಟರ್ಕಿಗೆ ತೆರಳಲು ಪ್ರಯತ್ನಿಸಿದೆ. ಆದರೆ, ಮತ್ತೆ ಸಿಕ್ಕಿ ಬಿದ್ದಿದ್ದಾನೆ ಎಂದು ಮೂಲಗಳು ತಿಳಿಸಿವೆ.





