ಚಿಲಿ ವಿರುದ್ಧ ಭಾರತಕ್ಕೆ ಜಯ, ಕ್ವಾ. ಫೈನಲ್ ಗೆ ಪ್ರವೇಶ

ಜೋಹಾನ್ಸ್‌ಬರ್ಗ್,ಜು.12: ಪ್ರೀತಿ ದುಬೆ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ ಚಿಲಿ ತಂಡವನ್ನು 1-0 ಅಂತರದಿಂದ ಮಣಿಸಿತು. ಈ ಮೂಲಕ ಎಫ್‌ಐಎಚ್ ಮಹಿಳೆಯರ ಹಾಕಿ ವಿಶ್ವ ಲೀಗ್‌ನಲ್ಲಿ(ಎಚ್‌ಡಬ್ಲುಎಲ್) ಕ್ವಾರ್ಟರ್ ಫೈನಲ್ ತಲುಪಿದೆ.
ಬುಧವಾರ ನಡೆದ ಪಂದ್ಯದಲ್ಲಿ ಪ್ರೀತಿ 38ನೆ ನಿಮಿಷದಲ್ಲಿ ಬಾರಿಸಿದ ಗೋಲಿನ ಸಹಾಯದಿಂದ ಭಾರತ ತಂಡ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಮೊದಲ ಜಯ ದಾಖಲಿಸಿತು. ದಕ್ಷಿಣ ಆಫ್ರಿಕ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ್ದ ಭಾರತ ತಂಡ ಅಮೆರಿಕದ ವಿರುದ್ಧ ಕಳೆದ ಪಂದ್ಯದಲ್ಲಿ 1-4 ಅಂತರದಿಂದ ಸೋತಿತ್ತು.
ಉಭಯ ತಂಡಗಳು ಮೊದಲ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದಿದ್ದರೂ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾದವು. ಚಿಲಿ ಪಂದ್ಯ ಆರಂಭವಾಗಿ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರೆ, ಭಾರತ 12ನೆ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆದಿತ್ತು.
19ನೆ ನಿಮಿಷದಲ್ಲಿ ಅನುಪಾ ಬಾರ್ಲ ಚಿಲಿ ಆಟಗಾರ್ತಿಯಿಂದ ಚೆಂಡನ್ನು ಕಸಿದುಕೊಂಡು ಪ್ರತಿದಾಳಿಗೆ ವೇದಿಕೆ ನಿರ್ಮಿಸಿದ್ದರು. ಆದರೆ, ಸ್ಟ್ರೈಕರ್ ವೃತ್ತದಲ್ಲಿದ್ದ ರಾಣಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಲು ವಿಫಲರಾದರು.
38ನೆ ನಿಮಿಷದಲ್ಲಿ ಚಿಲಿ ಗೋಲ್‌ಕೀಪರ್‌ನ್ನು ವಂಚಿಸಿದ ಪ್ರೀತಿ ಭಾರತಕ್ಕೆ ಮಹತ್ವದ ಮುನ್ನಡೆ ಒದಗಿಸಿಕೊಟ್ಟರು. ನಿರಂತರ ದಾಳಿ ನಡೆಸಿದ ಭಾರತ ತಂಡ ಚಿಲಿಗೆ ಒತ್ತಡ ಹೇರಿತು. ರಾಣಿ ಮತ್ತೊಮ್ಮೆ ಗೋಲು ಬಾರಿಸುವ ಅವಕಾಶ ಪಡೆದಿದ್ದರು. ಆದರೆ, ಚಿಲಿ ಗೋಲ್‌ಕೀಪರ್ ಇದಕ್ಕೆ ಅವಕಾಶ ನೀಡಲಿಲ್ಲ. ರೇಣುಕಾ ಯಾದವ್ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರ ನಡೆದಾಗ ಭಾರತ ದ್ವೀತಿಯಾರ್ಧದಲ್ಲಿ 10 ಆಟಗಾರ್ತಿಯರೊಂದಿಗೆ ಆಡಬೇಕಾಯಿತು. ಅಂತಿಮ 15 ನಿಮಿಷಗಳಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡು ಬಂತು. ಚಿಲಿ ತಂಡ ಭಾರತದ ರಕ್ಷಣಾ ಕೋಟೆ ಭೇದಿಸಲು ಸತತ ಯತ್ನ ನಡೆಸಿತು. ಬಾರ್ಲ 54ನೆ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಅವಕಾಶ ಪಡೆದಿದ್ದರು. ಆದರೆ, ಅದನ್ನು ಗೋಲಾಗಿ ಪರಿವರ್ತಿಸಲು ವಿಫಲರಾದರು.
ಭಾರತ ಜುಲ16 ರಂದು ನಡೆಯಲಿರುವ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಅರ್ಜೆಂಟೀನ ತಂಡವನ್ನು ಎದುರಿಸಲಿದೆ.







