ಮಾದಕ ವಸ್ತು ವ್ಯಾಪಾರ: ‘ನಾಸಾ’ ಮಾಜಿ ವಿಜ್ಞಾನಿಯ ಬಂಧನ

ಹೈದರಾಬಾದ್, ಜು.14: ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ನಾಸಾದ ಮಾಜಿ ವಿಜ್ಞಾನಿ ಮತ್ತು ಆತನ ಸಹಚರನೋರ್ವನನ್ನು ಬಂಧಿಸಲಾಗಿದೆ.
ಅನೀಶ್ ದುಂಡೂ ಮತ್ತು ರಿತುಲ್ ಅಗರ್‌ವಾಲ್ ಬಂಧಿತ ವ್ಯಕ್ತಿಗಳು. ಕಳೆದ ಕೆಲ ದಿನಗಳಿಂದ ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದ ಅಬಕಾರಿ ಇಲಾಖೆಯ ವಿಶೇಷ ಕಾರ್ಯಪಡೆಯ ಅಧಿಕಾರಿಗಳು 10 ವ್ಯಾಪಾರಿಗಳನ್ನು ಬಂಧಿಸಿದ್ದರು. ಇವರ ಮೊಬೈಲ್ ಫೋನ್‌ನ ಕರೆ ವಿವರ ಪರಿಶೀಲಿಸಿದಾಗ ಅನೀಶ್ ಮತ್ತು ರಿತುಲ್ ಬಗ್ಗೆ ಸಂಶಯ ಮೂಡಿದೆ. ಇವರಿಬ್ಬರೂ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆ ಎಂದು ಬಂಧಿತರು ವಿಚಾರಣೆ ಸಂದರ್ಭ ಬಾಯಿ ಬಿಟ್ಟಿದ್ದಾರೆ.
ಡೆಹ್ರಾಡೂನ್‌ನ ಪ್ರತಿಷ್ಠಿತ ಡೂನ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಅನೀಶ್, ಬಳಿಕ ಅಮೆರಿಕದ ಸಿನ್ಸಿನಾಟಿ ವಿವಿಯಿಂದ ಆಂತರಿಕ್ಷಶಾಸ್ತ್ರ, ವೈಮಾನಿಕ ಶಾಸ್ತ್ರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ. ‘ನಾಸ’ದಲ್ಲಿ ಒಂದು ವರ್ಷ ಕೆಲಸ ಮಾಡಿದ ಬಳಿಕ 2012ರಲ್ಲಿ ಹೈದರಾಬಾದ್‌ನಲ್ಲಿ ಸ್ವಂತ ಉದ್ಯಮ ಸ್ಥಾಪಿಸಿದ್ದ. ಪ್ರಸಕ್ತ ಬಿಟ್‌ಕಾಯಿನ್ ಮಾರಾಟ ಮತ್ತಿತರ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಡಾರ್ಕ್‌ನೆಟ್(ಗುಪ್ತ ಅಂತರ್ಜಾಲ ವ್ಯವಸ್ಥೆ)ನಲ್ಲಿರುವ ‘ಲೂನಸಿ’ ಮಾರ್ಕೆಟ್‌ನಲ್ಲಿ ಬಿಟ್‌ಕಾಯಿನ್ ಮೂಲಕ ಹಣ ಪಾವತಿಸಿ ಮಾದಕ ವಸ್ತುವನ್ನು ಖರೀದಿಸುತ್ತಿರುವುದಾಗಿ ಅನೀಶ್ ತಿಳಿಸಿದ್ದಾನೆ. ರಿತುಲ್ ಜೊತೆಗೂಡಿ 2017ರ ಮೇ ತಿಂಗಳಿನಿಂದ ಮಾದಕ ದೃವ್ಯ ಮಾರಾಟದಲ್ಲಿ ತೊಡಗಿದ್ದ ಅನೀಶ್ , ಇದುವರೆಗೆ ಕನಿಷ್ಟ 8 ಬಾರಿ ಡಾರ್ಕ್‌ನೆಟ್ ಸೈಟ್‌ನಿಂದ ಕೊಕೈನ್, ಎಲ್‌ಎಸ್‌ಡಿ ಮತ್ತಿತರ ಮಾದಕ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡಿದ್ದ ಎಂದು ವಿಶೇಷ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.







